ಕೋಲ್ಕತ್ತ: ಭವಾನಿಪುರ ವಿಧಾನಸಭೆ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿಯ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
‘ಇದು ಅನ್ಯಾಯದ ವಿರುದ್ಧದ ಹೋರಾಟ. ಪಶ್ಚಿಮ ಬಂಗಾಳದ ಜನರ ನ್ಯಾಯಕ್ಕಾಗಿ ಹೋರಾಟ’ ಎಂದು ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಟಿಬ್ರೆವಾಲ್, ‘ಭವಾನಿ ಪುರದ ಜನರಿಗೆ ಲಭಿಸಿರುವ ದೊಡ್ಡ ಅವಕಾಶ ಇದಾಗಿದೆ. ಜನರು ಮುಂದೆ ಬಿಜೆಪಿಯನ್ನು ಗೆಲ್ಲಿಸಿ ಇತಿಹಾಸ ರಚಿಸಬೇಕು’ ಎಂದು ಕರೆ ನೀಡಿದ್ದಾರೆ. ಭವಾನಿಪುರ ಉಪಚುನಾವಣೆಯು ಸೆ.30ರಂದು ನಡೆಯಲಿದ್ದು, ಅಕ್ಟೋಬರ್ 3ರಂದು ಫಲಿತಾಂಶ ಹೊರಬೀಳಲಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ, ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆದರೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಈ ಕ್ಷೇತ್ರದಲ್ಲಿ ಗೆಲುವು ದಾಖಲಿಸುವುದು ಅನಿವಾರ್ಯವಾಗಿದೆ.
2011 ಹಾಗೂ 2016ರ ವಿಧಾನಸಭೆ ಚುನಾವಣೆಗಳಲ್ಲಿ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಮಮತಾ ಗೆಲುವು ದಾಖಲಿಸಿದ್ದರು. ಉಪಚುನಾವಣೆಯಲ್ಲಿ ಮಮತಾ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ. ಭವಾನಿಪುರದಿಂದ ಗೆದ್ದಿರುವ ಟಿಎಂಸಿ ಶಾಸಕ ಸೋಮದೇವ್ ಚಟ್ಟೋಪಾಧ್ಯಾಯ ಕ್ಷೇತ್ರ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.