Sunday, 15th December 2024

ಕಾಶ್ಮೀರಕ್ಕೆ ಪಂಡಿತರು ಮರಳಿದರೆ, ಆಸ್ತಿ, ಮನೆ ಬಿಟ್ಟುಕೊಡಲು ಸಿದ್ಧ: ಸಿಆರ್‌ಪಿಎಫ್‌

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದು ಬಳಿಕ ಕಣಿವೆಯಲ್ಲಿ ಶಾಂತಿ ನೆಲೆಸುತ್ತಿದ್ದು, ಮೂಲಭೂತವಾದಿಗಳ ಉಪಟಳದಿಂದ ಕಣಿವೆ ತೊರೆದಿದ್ದ ಪಂಡಿತರು ಮರಳುತ್ತಿದ್ದಾರೆ.

ಕಾಶ್ಮೀರಕ್ಕೆ ಪಂಡಿತರು ವಾಪಸಾಗುವುದಾದರೆ ನಾವು ಅವರ ಆಸ್ತಿ, ಮನೆಗಳನ್ನು ಬಿಟ್ಟುಕೊಡಲು ಸಿದ್ಧ ಎಂದು ಸಿಆರ್‌ಪಿಎಫ್‌ ತಿಳಿಸಿದೆ.

ಸಾವಿರಾರು ಪಂಡಿತರು ಕಾಶ್ಮೀರ ತೊರೆದ ಬಳಿಕ ಅವರ ನಿವಾಸ, ಆಸ್ತಿಗಳಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿ ವಾಸಿಸುತ್ತಿದ್ದಾರೆ. ಮನೆಗಳನ್ನು ಯೋಧರ ಕಚೇರಿ ಗಳನ್ನಾಗಿ ಮಾಡಲಾಗಿದೆ. ಸುಮಾರು 737 ಆಸ್ತಿಗಳಲ್ಲಿ 333 ಸರಕಾರಿ ಕಚೇರಿಗಳಿದ್ದರೆ, 265 ಖಾಸಗಿ ಕಟ್ಟಡಗಳಿವೆ. ಅಲ್ಲದೆ, 71 ಭೂಭಾಗಗಳು, 26 ಕಾರ್ಖಾನೆಗಳು, 30 ಹೋಟೆಲ್‌ಗಳು ಸಹ ಇದ್ದು, ಇವುಗಳಲ್ಲಿ ಬಹುತೇಕ ಕಟ್ಟಡ ಗಳು ಕಾಶ್ಮೀರಿ ಪಂಡಿತರಿಗೆ ಸೇರಿವೆ.

ಹಾಗಾಗಿ, ಪಂಡಿತರು ವಾಪಸಾದರೆ ಅವರಿಗೆ ಅವರ ಮನೆಗಳನ್ನು ಬಿಟ್ಟುಕೊಡಲು ಸಿದ್ಧ ಎಂದು ಸಿಆರ್‌ಪಿಎಫ್‌ ಡಿಜಿ ಕುಲದೀಪ್‌ ಸಿಂಗ್‌ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಪರಿಸ್ಥಿತಿ ತಹಬಂದಿಗೆ ಬಂದಿರುವ ಕಾರಣ ಪಂಡಿತರು ವಾಪಸಾಗಲು ಬಯಸುತ್ತಿದ್ದಾರೆ ಎಂದು ತಿಳಿದುಬಂದಿದೆ. ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ದೇಶಾದ್ಯಂತ ಸುದ್ದಿಯಾಗುತ್ತಿದ್ದು, ಪಂಡಿತರನ್ನು ವಾಪಸ್‌ ಕರೆಸಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ.