ಖೈಬರ್ ಪಖ್ತುಂಖ್ವಾ: ಭಯೋತ್ಪಾದನೆ ಘಟನೆಗಳಿಂದ ರೋಸಿ ಹೋಗಿರುವ ಪಾಕಿಸ್ತಾನದ ಸ್ವಾತ್ ಕಣಿವೆ ಮತ್ತು ಶಾಂಗ್ಲಾ ನಿವಾಸಿಗಳು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಣಿವೆ ಪ್ರದೇಶದಲ್ಲಿನ ಭಯೋತ್ಪಾದನೆ ವಿರುದ್ಧ ಪಾಕ್ ಸರ್ಕಾರ ಇನ್ನೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಉಗ್ರರನ್ನು ಮಟ್ಟ ಹಾಕಲು ಅಧಿಕಾರಿಗಳು ವಿಫಲರಾದರೆ, ನಾವೇ ಶಸ್ತ್ರಾಸ್ತ್ರ ಗಳನ್ನು ಕೈಗೆತ್ತಿಕೊಂಡು ಉಗ್ರರನ್ನು ಸದೆಬಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ರುವುದಾಗಿ ವರದಿ ತಿಳಿಸಿದೆ.
ಸ್ಥಳೀಯ ಸಂಘಟನೆಯಾದ ಖ್ವಾಮಿ ಜಿರ್ಗಾ ಪ್ರತಿಭಟನೆ ಆಯೋಜಿಸಿದ್ದು, ಚಾರ್ ಬಾಗ್ ನ ವಿವಿಧ ಪ್ರದೇಶಗಳಿಂದ ಹಿರಿಯರು, ಯುವಕರು, ಮಕ್ಕಳು ಭಾಗವಹಿಸಿದ್ದರು.
ಕಣಿವೆ ಪ್ರದೇಶದಲ್ಲಿ ಶಾಂತಿಯನ್ನು ಪುನರ್ ಸ್ಥಾಪಿಸಿ ಎಂಬ ಘೋಷಣೆ ಕೂಗಿ ಪ್ರತಿಭಟನೆ ನಡೆಸಿರುವುದಾಗಿ ವರದಿ ವಿವರಿಸಿದೆ.
ಉಗ್ರರು ಶಾಲಾ ವಾಹನವನ್ನು ಗುರಿಯಾಗಿರಿಸಿಕೊಂಡು ಗುಂಡಿನ ದಾಳಿ ನಡೆಸಿದ್ದ ಪರಿಣಾಮ ಚಾಲಕ ಮೃತಪಟ್ಟಿದ್ದು, ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಡೆದಿತ್ತು.