Thursday, 12th December 2024

ಪುದುಚೇರಿ: ಘಟಿಕೋತ್ಸವದಲ್ಲಿ ಬಿಜೆಪಿ ಶಾಸಕರ ರಂಪಾಟ

ಪುದುಚೇರಿ: ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೋತ್ಸವದ ವೇಳೆ ಬಿಜೆಪಿ ಶಾಸಕರೊಬ್ಬರು, ವೇದಿಕೆ ಮೇಲೆಯೇ ಆಯೋಜಕರೊಂದಿಗೆ ಜಗಳ ವಾಡಿದ ಘಟನೆ ನಡೆದಿದೆ.

ಪುದುಚೇರಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ಲೆಫ್ಟಿನೆಂಟ್​ ಗವರ್ನರ್​ ತಮಿಳಿಸಾಯಿ ಸುಂದರ ರಾಜನ್ ಮತ್ತು ಮುಖ್ಯಮಂತ್ರಿ ರಂಗಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಇವರಿಬ್ಬರೂ ಆಗಮಿಸಿರಲಿಲ್ಲ. ಗೃಹ ಸಚಿವ ನಮಚಿವಾಯಂ, ಸಚಿವ ಸಾಯಿ ಸರವಣನ್​, ಸಂಸದರಾದ ವೈತಿಲಿಂಗಂ ಮತ್ತು ಸೆಲ್ವ ಗಣಪತಿ, ಶಾಸಕ ಕಲ್ಯಾಣಸುಂದರಂ ಪಾಲ್ಗೊಂಡಿದ್ದರು.

ಇವರಲ್ಲಿ ಬಿಜೆಪಿ ಶಾಸಕ ಕಲ್ಯಾಣಸುಂದರಂ ಅವರು ವೇದಿಕೆ ಮೇಲೆಯೇ ಆಯೋಜಕರ ವಿರುದ್ಧ ತೀವ್ರ ಕಿರಿಕಿರಿ ಗೊಂಡು ಹರಿಹಾಯ್ದಿದ್ದಾರೆ. ಲೆಫ್ಟಿನೆಂಟ್​ ಗವರ್ನರ್​ ಮತ್ತು ಸಿಎಂ ಇಬ್ಬರೂ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ಆಯೋಜಕರು, ಪುದುಚೇರಿಯ ಜವಾಹರಲಾಲ್ ಇನ್​​ಸ್ಟಿಟ್ಯೂಟ್ ಆಫ್​ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ನಿರ್ದೇಶಕ ರಾಕೇಶ್ ಅಗರ್​ವಾಲ್​ ಅವರನ್ನು ಕರೆದರು.

ಇದೇ ಕಾರಣಕ್ಕೆ ಅಸಮಾಧಾನಗೊಂಡ ಬಿಜೆಪಿ ಶಾಸಕ ಕಲ್ಯಾಣ ಸುಂದರಂ, ‘ವೇದಿಕೆ ಮೇಲೆ ಸಚಿವರು ಇದ್ದಾರೆ.

ಇನ್ನಿತರ ಗಣ್ಯರು ಇದ್ದಾರೆ. ಹೀಗಿರುವಾಗ ಪದವಿ ಪ್ರಮಾಣ ಪತ್ರ ನೀಡಲು JIPMER ನಿರ್ದೇಶಕನನ್ನು ಕರೆದಿದ್ದೇಕೆ. ಇದು ಇಲ್ಲಿರುವ ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರಿಗೆ ಅವಮಾನ ಮಾಡಿದಂತೆ. ಹೀಗೆ ಇವರನ್ನೆಲ್ಲ ಅವಮಾನಿಸಲು ನೀವ್ಯಾರು?’ ಎಂದು ಕೋಪದಿಂದ ಕೂಗಾಡಿದ್ದಾರೆ.