Saturday, 14th December 2024

ಡ್ರೋನ್‌ ದಾಳಿ ಬೆನ್ನಲ್ಲೇ ಪುಲ್ವಾಮಾದಲ್ಲಿ ಉಗ್ರರ ದಾಳಿ: ಪೊಲೀಸ್‌ ಪತ್ನಿ ಸಾವು

ನವದೆಹಲಿ: ಭಾರತೀಯ ವಾಯುಸೇನೆ ನಿಯಂತ್ರಣದಲ್ಲಿರುವ ಜಮ್ಮು ವಿಮಾನ ನಿಲ್ದಾಣದಲ್ಲಿ ಎರಡು ಸ್ಫೋಟ ಸಂಭವಿಸಿದ ಬೆನ್ನಲ್ಲೇ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಉಗ್ರರ ದಾಳಿ ನಡೆದಿದ್ದು, ಪೊಲೀಸ್ ವಿಶೇಷಾಧಿಕಾರಿ ಹಾಗೂ ಅವರ ಪತ್ನಿ ಮೃತಪಟ್ಟಿದ್ದಾರೆ.

ಅವಂತಿಪೊರಾದ ಹರಿಪರಿಗಾಂವ್‌ನಲ್ಲಿರುವ ಪೊಲೀಸ್ ವಿಶೇಷಾಧಿಕಾರಿ ಫಯಾಜ್ ಅಹ್ಮದ್ ಅವರ ನಿವಾಸಕ್ಕೆ ನುಗ್ಗಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

ಗಾಯಗೊಂಡಿದ್ದ ಪೊಲೀಸ್ ಅಧಿಕಾರಿ ಹಾಗೂ ಅವರ ಕುಟುಂಬದವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಫಯಾಜ್ ಪತ್ನಿ ರಾಜಾ ಬೇಗಂ ಮೃತಪಟ್ಟಿದ್ದಾರೆ. ಜಮ್ಮು ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯುಪಡೆ ಕೇಂದ್ರವೊಂದರ ಮೇಲೆ ಭಾನುವಾರ ಡ್ರೋನ್ ಮೂಲಕ ಉಗ್ರರು ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಪುಲ್ವಾಮಾದಲ್ಲಿ ಮತ್ತೊಂದು ದಾಳಿ ನಡೆಸಲಾಗಿದೆ.

ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದ್ದು, ಇಬ್ಬರು ಭಾರತೀಯ ಸೇನಾ ಪಡೆ ಸಿಬ್ಬಂದಿ ಗಾಯಗೊಂಡಿದ್ದರು.ಒಂದೇ ಕಿಲೋ ಮೀಟರ್ ದೂರದಲ್ಲಿರುವ ಬಯಲು ಪ್ರದೇಶದಲ್ಲಿ ಎರಡನೇ ಸ್ಫೋಟ ಸಂಭವಿಸಿತ್ತು. ಮೊದಲ ಬಾರಿಗೆ ಉಗ್ರರ ದಾಳಿಗೆ ಡ್ರೋನ್ ಬಳಕೆ ಆಗಿರುವುದು ತಿಳಿದುಬಂದಿದೆ.