ಪುಣೆ: ಮಹಾರಾಷ್ಟ್ರದ ಪುಣೆ ನಗರದಲ್ಲಿ ಝಿಕಾ ವೈರಸ್ ಪತ್ತೆಯಾಗಿದ್ದು, 46 ವರ್ಷದ ವೈದ್ಯ ಮತ್ತು ಅವರ ಹದಿಹರೆಯದ ಮಗಳಿಗೆ ಝಿಕಾ ವೈರಸ್ ಪಾಸಿಟಿವ್ ದೃಢಪಟ್ಟಿದೆ. ಆದರೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ವ್ಯಕ್ತಿಗೆ ಇತ್ತೀಚೆಗೆ ಜ್ವರ ಮತ್ತು ದದ್ದುಗಳಂತಹ ಲಕ್ಷಣಗಳು ಕಾಣಿಸಿಕೊಂಡಿದ್ದು, ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ(ಎನ್‌ಐವಿ) ಕಳುಹಿಸಲಾಗಿದೆ. ವರದಿ ಬಂದಿದ್ದು, ಝಿಕಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಎಂದು ಪುಣೆ ಮುನ್ಸಿಪಲ್ ಕಾರ್ಪೊರೇಷನ್(PMC)ನ ಆರೋಗ್ಯ ಅಧಿಕಾರಿ ಹೇಳಿದ್ದಾರೆ.
ಸೋಂಕಿತ ವೈದ್ಯ ನಗರದ ಎರಂದವಾಣೆ ನಿವಾಸಿಯಾಗಿದ್ದು, ಅವರಿಗೆ ಪಾಸಿಟಿವ್ ಬಂದ ನಂತರ, ಅವರ ಕುಟುಂಬದ ಐದು ಸದಸ್ಯರ ರಕ್ತದ ಮಾದರಿ ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು ಮತ್ತು ಅವರ 15 ವರ್ಷದ ಮಗಳಿಗೂ ಝಿಕಾ ವೈರಸ್ ಪಾಸಿಟಿವ್ ಬಂದಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ.