Friday, 22nd November 2024

ಪಂಜಾಬ್‌ ಮಾಜಿ ಶಾಸಕರಿಗೆ ಒಂದು ಅವಧಿಗೆ ಮಾತ್ರ ಪಿಂಚಣಿ

ಚಂಡೀಗಢ: ಮಾಜಿ ಶಾಸಕರಿಗೆ ಒಂದು ಅವಧಿಗೆ ಮಾತ್ರ ಪಿಂಚಣಿ ನೀಡುವ ಮಸೂದೆ ಕುರಿತು ಸರ್ಕಾರವು ಶನಿವಾರ ಅಧಿಸೂಚನೆ ಹೊರಡಿಸಿದೆ.

ಪಂಜಾಬ್ ಶಾಸಕರ (ಪಿಂಚಣಿ ಮತ್ತು ವೈದ್ಯಕೀಯ ಸೌಲಭ್ಯಗಳ ನಿಯಂತ್ರಣ) ತಿದ್ದುಪಡಿ ಮಸೂದೆ- 2022 ಅನ್ನು ಪಂಜಾಬ್ ವಿಧಾನಸಭೆಯಲ್ಲಿ ಜೂನ್ 30 ರಂದು ಅಂಗೀಕರಿಸಲಾಗಿತ್ತು.

ಒಬ್ಬ ಶಾಸಕ-ಒಂದು ಪಿಂಚಣಿ’ ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿ ದ್ದಾರೆ ಎಂದು ಪಂಜಾಬಿಗಳಿಗೆ ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ. ಸರ್ಕಾರವು ಅಧಿಸೂಚನೆ ಹೊರಡಿಸಿದೆ’ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಶನಿವಾರ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಈ ಕ್ರಮದಿಂದಾಗಿ ಸರ್ಕಾರಕ್ಕೆ ವಾರ್ಷಿಕವಾಗಿ ಸುಮಾರು ₹19.53 ಕೋಟಿ ರೂಪಾಯಿ ಉಳಿತಾಯವಾಗಲಿದೆ.

ಅನೇಕ ಶಾಸಕರು ಎರಡು ಬಾರಿ, ಐದು ಅಥವಾ ಹತ್ತು ಬಾರಿ ಗೆದ್ದವರಿರುತ್ತಾರೆ. ಅಂಥವರು ಪ್ರತಿ ಅವಧಿಗೂ ಪಿಂಚಣಿಯನ್ನು ಪಡೆಯುತ್ತಿದ್ದಾರೆ. ಇಂಥವರು ಕೆಲವರು ಸೋತಿರುತ್ತಾರೆ, ಇನ್ನೂ ಕೆಲವರು ಟಿಕೆಟ್ ಪಡೆಯಲೂ ಆಗದೇ ಮನೆಯಲ್ಲಿ ಕುಳಿತಿದ್ದರೂ ಲಕ್ಷಾಂತರ ರೂಪಾಯಿ ಪಿಂಚಣಿ ಪಡೆಯುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹೊರೆಯಾಗುತ್ತಿದೆ’ ಎಂದು ಭಗವಂತ ಮಾನ್‌ ಹೇಳಿದ್ದರು.