Friday, 22nd November 2024

Punjab Shootout: ಪಂಜಾಬ್‌ನಲ್ಲಿ ಭೀಕರ ಘಟನೆ- ಆಪ್‌ ರೈತ ಮೋರ್ಚಾ ಅಧ್ಯಕ್ಷನನ್ನು ಗುಂಡಿಕ್ಕಿ ಹತ್ಯೆ

Punjab shootout

ಚಂಡೀಗಢ: ಆಮ್ ಆದ್ಮಿ ಪಕ್ಷದ (AAP) ಕಿಸಾನ್ ವಿಂಗ್ ಅಧ್ಯಕ್ಷ(Kisan wing President)ನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ರೈತ ಮೋರ್ಚಾ ಅಧ್ಯಕ್ಷ ತರ್ಲೋಚನ್ ಸಿಂಗ್ ಅಲಿಯಾಸ್ ಡಿಸಿ ಎಂಬುವವರನ್ನು ಸೋಮವಾರ ಸಂಜೆ ಪಂಜಾಬ್‌ನ ಖನ್ನಾದಲ್ಲಿ ಗುಂಡಿಕ್ಕಿ ಹತ್ಯೆ(Punjab Shootout) ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಕೋಲಾಹ ಗ್ರಾಮದವರಾದ 56 ವರ್ಷದ ತರ್ಲೋಚನ್ ಸಿಂಗ್ ತನ್ನ ಜಮೀನಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.

ರಸ್ತೆಬದಿಯಲ್ಲಿ ರಕ್ತಸಿಕ್ತ ರೀತಿಯಲ್ಲಿ ತರ್ಲೋಚನ್ ಸಿಂಗ್ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರ ನೆರವಿನೊಂದಿಗೆ ಮಗ ಅವರನ್ನು ಸಮೀಪದ ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಯ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಸಿಂಗ್ ಅವರ ಪುತ್ರ ಹರ್‌ಪ್ರೀತ್ ಸಿಂಗ್ ಅವರು ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಪೊಲೀಸರು ಎಲ್ಲಾ ಆಯಾಮದಿಂದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸೌರವ್ ಜಿಂದಾಲ್ ಹೇಳಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು’ ಎಂದು ಹೇಳಿದರು.

ಕೆಲವು ತಿಂಗಳ ಹಿಂದೆ ಇಂತಹದ್ದೇ ಒಂದು ಘಟನೆ ಮುಂಬೈನಲ್ಲಿ ನಡೆದಿದ್ದು, ಫೇಸ್‌ಬುಕ್ ಲೈವ್‌ನಲ್ಲಿದ್ದಾಗಲೇ ಉದ್ದವ್ ಠಾಕ್ರೆ ಬಣದ ಶಿವಸೇನಾ ನಾಯಕನ ಪುತ್ರರೊಬ್ಬರನ್ನು ಗುಂಡು ಹೊಡೆದು ಹತ್ಯೆ ಮಾಡಿದ ಘಟನೆ ನಡೆದಿತ್ತು.

ಶಿವಸೇನೆಯ ಯುಬಿಟಿ ನಾಯಕನ ಮಗ ಅಭಿಷೇಕ್ ಘೋಸಲ್ಕರ್ ಅವರೊಂದಿಗೆ ಫೇಸ್‌ಬುಕ್ ಲೈವ್ ಮಾಡುತ್ತಿದ್ದ ವ್ಯಕ್ತಿಯೇ ಅವರಿಗೆ ಶೂಟ್ ಮಾಡಿದ್ದಾನೆ. ಬಳಿಕ ತಾನು ಶೂಟ್ ಮಾಡಿಕೊಂಡು ಸಾವಿಗೀಡಾಗಿದ್ದಾನೆ. ಫೇಸ್‌ಬುಕ್ ಲೈವ್‌ನಲ್ಲಿ ಚಿತ್ರೀಕರಣದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘೋಸಲ್ಕರ್ ಮತ್ತು ಅವರ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿ ಇಬ್ಬರು ಮೃತಪಟ್ಟಿದ್ದಾರೆ. ಮುಂಬೈನ ದಹಿಸರ್ ಪ್ರದೇಶದ ಎಂಎಚ್‌ಬಿ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತ ಅಭಿಷೇಕ್ ಅವರು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಮಾಜಿ ಕೌನ್ಸಿಲರ್ ವಿನೋದ್ ಘೋಸಲ್ಕರ್ ಅವರ ಪುತ್ರರಾಗಿದ್ದಾರೆ.

ಮಾರಿಸ್ ಭಾಯ್’ ಎಂದು ಜನಪ್ರಿಯವಾಗಿ ಕರೆಯಲಾಗುವ ಮಾರಿಸ್ ನೊರೊನ್ಹಾ ಅವರ ಕಚೇರಿಗೆ ಅಭಿಷೇಕ್ ಘೋಸಲ್ಕರ್ ಅವರು ಹೋಗಿದ್ದರು. ಈ ವೇಳೆ, ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ಭಿನ್ನಾಭಿಪ್ರಾಯಗಳ ನಂತರ ಇಬ್ಬರು ಇತ್ತೀಚೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಮತ್ತು ವೆಬ್‌ಕಾಸ್ಟ್ ಆಗುತ್ತಿರುವ ಕಾರ್ಯಕ್ರಮಕ್ಕಾಗಿ ಘೋಸಲ್ಕರ್ ಅವರನ್ನು ಅವರ ಕಚೇರಿಗೆ ಆಹ್ವಾನಿಸಲಾಗಿತ್ತು. ಈ ವೇಳೆ ಅವರ ಮೇಲೆ ಗುಂಡು ಹೊಡೆದು ಸಾಯಿಸಲಾಯಿತು. ಆದರೆ, ಗುಂಡಿನ ದಾಳಿಯ ಹಿಂದಿನ ಕಾರಣ ಏನು ಎಂಬುದು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: America shootout: ರಾಷ್ಟ್ರೀಯ ಹೆದ್ದಾರಿಯಲ್ಲಿ ಶೂಟೌಟ್‌; ಏಳು ವಾಹನ ಚಾಲಕರಿಗೆ ಗಂಭೀರ ಗಾಯ- ದುಷ್ಕರ್ಮಿ ಎಸ್ಕೇಪ್‌