Saturday, 14th December 2024

ಪಂಜಾಬ್ ನಲ್ಲಿ ಭಯೋತ್ಪಾದಕ ಸಂಚು ಪತ್ತೆ: ಐವರ ಬಂಧನ

ಚಂಡೀಗಢ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಪಂಜಾಬ್ ನಲ್ಲಿ ಮತ್ತೊಂದು ಭಯೋತ್ಪಾದಕ ಸಂಚು ಪತ್ತೆಯಾಗಿದ್ದು, ಟಾರ್ಗೆಟ್ ಹತ್ಯೆಗಳನ್ನು ನಡೆಸಲು ಉದ್ದೇಶಿಸಿದ್ದ 5 ಮಂದಿಯನ್ನು ಬಂಧಿಸಲಾಗಿದೆ.
ಆರೋಪಿಗಳು ಪಾಕಿಸ್ತಾನ ಮೂಲದ ಹರ್ವಿಂದರ್ ರಿಂಡಾ, ಹಾಗೂ ಪಾಕ್ ಮೂಲಕದ ಗೋಲ್ಡಿ ಬ್ರಾರ್ ಅವರ ಕಾರ್ಯಕರ್ತರೆಂದು ಗುರುತಿಸಲಾಗಿರುವುದಾಗಿ ಡಿಜಿಪಿ ಗೌರವ್ ಯಾದವ್ ಹೇಳಿದ್ದಾರೆ. ಬಂಧಿತರಿಂದ ಎರಡು ವಿದೇಶಿ ತಯಾರಿತ ಪಿಸ್ತೂಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ.
ಮಹತ್ವದ ಬೆಳವಣಿಗೆಯಲ್ಲಿ ಪಂಜಾಬ್ ಪೊಲೀಸರು ಭಯೋತ್ಪಾದಕರ ಸಂಚನ್ನು ಬಯಲು ಮಾಡಿದ್ದು, ಕೇಂದ್ರೀಯ ಏಜೆನ್ಸಿ ಹಾಗೂ ಪಂಜಾಬ್ನಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಯತ್ನಗಳನ್ನು ವಿಫಲಗೊಳಿಸಲಾಗಿದೆ ಎಂದು ಯಾದವ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಶಸ್ತ್ರಾಸ್ತ್ರಗಳಷ್ಟೇ ಅಲ್ಲದೇ ಆರೋಪಿಗಳು ಅಮೇರಿಕಾದಿಂದ ಆರ್ಥಿಕ ನೆರವನ್ನೂ ಪಡೆಯುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು ಇಡೀ ಜಾಲವನ್ನು ಬೇಧಿಸಲು ತನಿಖೆ ಮುಂದುವರೆದಿದೆ ಎಂದು ಯಾದವ್ ತಿಳಿಸಿದ್ದಾರೆ. ಆ.13 ರಂದೂ ಇಂಥಹದ್ದೇ ಒಂದು ಜಾಲವನ್ನು ಪಂಜಾಬ್ ಪೊಲೀಸರು ಪತ್ತೆ ಮಾಡಿದ್ದರು.