Sunday, 1st December 2024

ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ಉತ್ತರಾಖಂಡ : ಉತ್ತರಾಖಂಡದ 11 ನೇ ಮುಖ್ಯಮಂತ್ರಿಯಾಗಿ ಬಿಜೆಪಿಯ ಖತಿಮಾ ಶಾಸಕ ಪುಷ್ಕರ್ ಸಿಂಗ್ ಧಾಮಿ ಭಾನುವಾರ ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ತಿರತ್ ಸಿಂಗ್ ರಾವತ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಧಾಮಿ ತಮ್ಮ 45 ನೇ ವಯಸ್ಸಿನಲ್ಲಿ ಉತ್ತರಾಖಂಡದ 11 ನೇ ಮುಖ್ಯಮಂತ್ರಿ ಯಾಗಿದ್ದಲ್ಲದೇ, ರಾಜ್ಯದ ಮೊದಲ ಕಿರಿಯ ಮುಖ್ಯಮಂತ್ರಿ ಎನ್ನುವುದಕ್ಕೆ ಪಾತ್ರರಾಗಿದ್ದಾರೆ.

ಸಮಾರಂಭದಲ್ಲಿ ಧನ್ ಸಿಂಗ್ ರಾವತ್, ರೇಖಾ ಆರ್ಯ ಮತ್ತು ಸ್ವಾಮಿ ಯತಿಶ್ವರಾನಂದ್ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯ ಸಚಿವ ಸಂಪುಟದಲ್ಲಿ ಬಿಶನ್ ಸಿಂಗ್ ಚುಫಾಲ್, ಸುಬೋಧ್ ಯುನಿಯಲ್, ಅರವಿಂದ್ ಪಾಂಡೆ, ಸತ್ಪಾಲ್ ಮಹಾರಾಜ್, ಹರಾಕ್ ಸಿಂಗ್ ರಾವತ್, ಬನ್ಸಿಧರ್ ಭಗತ್, ಮತ್ತು ಗಣೇಶ್ ಜೋಶಿ ಮತ್ತು ಇನ್ನಿಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನಾನು ಯುವಕರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಯುವಕರ ಸಮಸ್ಯೆಗಳನ್ನು ನಾನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಕೋವಿಡ್ ನಂತಹ ಪರಿಸ್ಥಿತಿ ಯುವಕರ ಜೀವನೋಪಾಯದ ಮೇಲೆ ದೊಡ್ಡ ಪರಿಣಾಮ ಬೀರಿದೆ. ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಸರ್ಕಾರದ ವಿವಿಧ ಹುದ್ದೆಗಳಿಗೆ ಅರ್ಹತೆಗನುಗುಣವಾಗಿ ಯುವಕರನ್ನು ನೇಮಿಸಿಕೊಳ್ಳುವ ಪ್ರಯತ್ನವನ್ನೂ ಕೂಡ ಮಾಡುತ್ತೇನೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ನೂತನ ಮುಖ್ಯಮಂತ್ರಿ ಧಾಮಿ ಹೇಳಿದ್ದಾರೆ.

ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ. ಪಿ ನಡ್ಡಾ ಸೇರಿ ಹಲವು ಪ್ರಮುಖ ನಾಯಕರು ತಮ್ಮ ಅಧಿಕೃತ ಟ್ವೀಟರ್ ಮೂಲಕ ಶುಭಾಶಯ ಕೋರಿದ್ದಾರೆ.