Wednesday, 4th December 2024

Pushpa 2: ‘ಪುಷ್ಪ 2’ 3ಡಿ ವರ್ಷನ್‌ ಬುಕ್ಕಿಂಗ್ ಸ್ಥಗಿತ: ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ನಿರಾಸೆ

ಹೈದರಾಬಾದ್:‌ ‘ಪುಷ್ಪ 2’(Pushpa 2) ಚಿತ್ರದ 3ಡಿ ವರ್ಷನ್ (3D Version) ರಿಲೀಸ್ ಮಾಡುವುದಾಗಿ ಚಿತ್ರ ತಂಡ ಹೇಳಿಕೊಂಡಿತ್ತು. ಆದರೆ ಈಗ ಚಿತ್ರ ತಂಡ ತನ್ನ ನಿಲುವನ್ನು ಬದಲಿಸಿಕೊಂಡಿದ್ದು, ಕಾರಣಾಂತರಗಳಿಂದ ಈ ವಾರ ‘ಪುಷ್ಪ 2’ ಚಿತ್ರದ 3ಡಿ ವರ್ಷನ್ ರಿಲೀಸ್ ಮಾಡುತ್ತಿಲ್ಲ. ಈ ಕುರಿತು ಸಿನಿಮಾ ಟ್ರೇಡ್‌ ವಿಶ್ಲೇಷಕ ಪಂಡಿತ ತರಣ್ ಆದರ್ಶ್ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ(Cinema) ರಿಲೀಸ್‌ಗೂ ಮುನ್ನವೇ ಬಹುದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಈಗಾಗಲೇ ವಿಶ್ವದಾದ್ಯಂತ ಲಕ್ಷಾಂತರ ಟಿಕೆಟ್​ಗಳು ಮಾರಾಟವಾಗಿರುವುದು ತಿಳಿದು ಬಂದಿದೆ. ಅಭಿಮಾನಿಗಳು ವಾರಗಳ ಹಿಂದೆಯೇ ತನ್ನ ನೆಚ್ಚಿನ ನಟನ ಸಿನಿಮಾ ನೋಡಲು ಪ್ರಿ-ಬುಕ್ಕಿಂಗ್‌ ಮಾಡಿಕೊಂಡಿದ್ದಾರೆ. ಪ್ರಿ-ಬುಕ್ಕಿಂಗ್‌ ಮೂಲಕವೇ ಸಿನಿಮಾ 100 ಕೋಟಿ ಹಣ ಗಳಿಸಿದೆ ಎಂಬ ಸುದ್ದಿ ಹೊರ ಬಿದ್ದಿದ್ದು, ಫ್ಯಾನ್ಸ್‌ ಮತ್ತಷ್ಟು ಥ್ರಿಲ್‌ ಆಗಿದ್ದಾರೆ. ಪುಷ್ಪ2 ಚಿತ್ರ ಎಲ್ಲಾ ದಾಖಲೆಗಳನ್ನು ಮುರಿಯಲಿದೆ ಎನ್ನಲಾಗುತ್ತಿದೆ. ನಾಳೆ ‘ಪುಷ್ಪ 2’ ಚಿತ್ರ 2ಡಿ ಜೊತೆ 3ಡಿಯಲ್ಲೂ ರಿಲೀಸ್ ಆಗಬೇಕಿತ್ತು. ಆರಂಭದಲ್ಲಿ ಇದಕ್ಕೆ ಬುಕಿಂಗ್ ಕೂಡ ಓಪನ್ ಆಗಿತ್ತು. ಆದರೆ ಇದ್ದಕ್ಕಿದಂತೆ ಬುಕಿಂಗ್ ಸ್ಥಗಿತಗೊಂಡಿದೆ. ಅಲ್ಲು ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

ಈಗಾಗಲೇ ತೆಲುಗು ಮತ್ತು ಹಿಂದಿ 3ಡಿ ವರ್ಷನ್ ಬುಕಿಂಗ್ ಆಯ್ಕೆಯನ್ನು ‘ಬುಕ್ ಮೈ ಶೋ’ನಿಂದ ತೆಗೆದು ಹಾಕಲಾಗಿದ್ದು, ಮುಂದಿನ ವಾರಗಳಲ್ಲಿ 3ಡಿ ವರ್ಷನ್ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ‘ಪುಷ್ಪ’ ಚಿತ್ರ ಕೇವಲ 2ಡಿಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಆದರೆ, ‘ಪುಷ್ಪ 2’ ಚಿತ್ರವನ್ನು ತಂಡದವರು ವಿನೂತನವಾಗಿ ಬಿಡುಗಡೆ ಮಾಡುವ ಸಾಹಸಕ್ಕೆ ಮುಂದಾಗಿದ್ದರು. ಆದರೆ ಅದು ಈ ವಾರ ಸಾಧ್ಯವಾಗುತ್ತಿಲ್ಲ.

ತಡೆ ಅರ್ಜಿ ವಜಾ ; ಅರ್ಜಿದಾರನಿಗೇ ದಂಡ ವಿಧಿಸಿದ ಕೋರ್ಟ್

ಪುಷ್ಪ 2 ಸಿನಿಮಾ ಬಿಡುಗಡೆಗೆ ತಡೆಕೋರಿ ಸಿಕಂದರಾಬಾದ್ ನ ನಿವಾಸಿಯಾದ  ಶ್ರೀಶೈಲಂ ಎಂಬುವವರು ತೆಲಂಗಾಣ ಹೈಕೋರ್ಟ್‌(Telangana High Court) ಗೆ ಅರ್ಜಿ ಸಲ್ಲಿಸಿದ್ದರು. ಪುಷ್ಪ 1ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನ ವೈಭವೀಕರಿಸಲಾಗಿತ್ತು. ಹಾಗೇ ಪುಷ್ಪ 2ರಲ್ಲಿಯೂ ಅಕ್ರಮ ಚಟುವಟಿಕೆಗಳನ್ನೇ ವೈಭವೀಕರಿಸಿ ತೋರಿಸಲಾಗಿದ್ದು, ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಬಿಡುಗಡೆಗೆ ಅವಕಾಶ ಕೊಡಬೇಡಿ ಎಂದು ಅರ್ಜಿದಾರರು ತಮ್ಮ ದೂರಿನಲ್ಲಿ ತಿಳಿಸಿದ್ದರು.

ಆದರೆ ತೆಲಂಗಾಣ ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ. ಸಿನಿಮಾ ಇನ್ನೂ ಬಿಡುಗಡೆಗೊಂಡಿಲ್ಲ. ಟ್ರೇಲರ್‌ ಮತ್ತು‌ ಟೀಸರ್ ಗಳಲ್ಲಿ ಎಲ್ಲಿಯೂ ಕಾನುನು ಬಾಹಿರ ಚಟುವಟಿಕೆಗಳನ್ನು ಉತ್ತೇಜಿಸಿರುವುದಕ್ಕೆ ಸಾಕ್ಷಿಯಿಲ್ಲ. ಸಾಕ್ಷ್ಯಧಾರಗಳಿಲ್ಲದ ಅರ್ಜಿಯನ್ನು ಸಲ್ಲಿಸುವ ಮೂಲಕ ನ್ಯಾಯಾಂಗದ ಸಮಯ ವ್ಯರ್ಥ ಮಾಡಿದ ಹಿನ್ನೆಲೆ ಅರ್ಜಿದಾರರಿಗೆ ದಂಡ ವಿಧಿಸಲಾಗುವುದು ಎಂದು ಹೈಕೋರ್ಟ್ ಪೀಠ ಹೇಳಿದೆ.

ಪುಷ್ಪ 2 ದಿ ರೂಲ್ ಸಿನಿಮಾದಲ್ಲಿ ಅಲ್ಲು ಅರ್ಜುನ್, ಫಹಾದ್ ಫಾಸಿಲ್, ಕನ್ನಡದ ನಟ ಡಾಲಿ ಧನಂಜಯ್, ನಟಿ ರಶ್ಮಿಕಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಡುವೆ ಸಿನಿಮಾ ಟಿಕೆಟ್‌ ಭಾರೀ ದುಬಾರಿಯಾಗಿರುವ ಕಾರಣಕ್ಕೆ ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಫಸ್ಟ್‌ ಡೇ ಶೋ ಗೆ ಸಿನಿಮಾ ಟಿಕೆಟ್‌ ಬೆಲೆ ಒಂದೂವರೆಯಿಂದ ಎರಡು ಸಾವಿರವಿರುವುದರಿಂದ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಈ ಸುದ್ದಿಯನ್ನೂ ಓದಿ:Pushpa 2 : ʼಪುಷ್ಪ 2ʼ ಗೆ ಸೆನ್ಸಾರ್‌ ಬೋರ್ಡ್‌ನಿಂದ ಆಕ್ಷೇಪಣೆ – ಹಿಂಸಾತ್ಮಕ ದೃಶ್ಯಗಳಿಗೆ ಕತ್ತರಿ!