Thursday, 12th December 2024

ರಾಹುಲ್, ಪ್ರಿಯಾಂಕಾ ನನ್ನ ಕೂಗು ಕೇಳಲಿ: ರಾಜಸ್ಥಾನದ ಸಂತ್ರಸ್ಥೆ ಆಗ್ರಹ

ಬರಾನ್‌(ರಾಜಸ್ಥಾನ): ಇನ್ನೊಂದು ಆಘಾತಕಾರಿ ಘಟನೆಯೊಂದರಲ್ಲಿ ರಾಜಸ್ಥಾನದ ಬಾರನ್ ಜಿಲ್ಲೆಯ ಸಿಸ್ವಲಿ ಎಂಬಲ್ಲಿ ಮಹಿಳೆಯ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಘಟನೆ ಬೆಳಕಿಗೆ ಬಂದಿದೆ.

ಕಳೆದ ಜುಲೈನಲ್ಲಿ ತನ್ನನ್ನು ಇಬ್ಬರು ಎತ್ತಿಕೊಂಡು ಹೋಗಿ, ತಿಂಗಳ ಕಾಲ ನಿರಂತರ ಅತ್ಯಾಚಾರ ವೆಸಿಗಿದ್ದಾರೆ ಎಂದು  ಆರೋಪಿಸಿದ್ದಾಳೆ. ತನ್ನನ್ನು ಅಪಹರಿಸುವ ಮುನ್ನ, ನಿನ್ನ ತಾಯಿ ನಿನ್ನನ್ನು ಹುಡುಕಾಡುತ್ತಿದ್ದಾಳೆ ಎಂದು ನಂಬಿಸಿ, ಅಪರಿಚಿತ ಜಾಗಕ್ಕೆ ಕರೆದೊಯ್ದಿದ್ದಾರೆ. ತಾಯಿ ಕೃಷಿ ಕೆಲಸ ಮಾಡುತ್ತಿದ್ದು, ಹಾಗಾಗಿ ಆಕೆ ಇದ್ದ ಜಾಗಕ್ಕೆ ತೆರಳಬೇಕಿತ್ತು. ಈ ಕುರಿತು ಪ್ರಶ್ನಿಸಿದಾಗ, ನನ್ನ ಬಾಯಿಯನ್ನು ಕರವಸ್ತ್ರದಿಂದ  ಮುಚ್ಚಿದ್ದು, ಕೊಲೆ ಬೆದರಿಕೆ ಹಾಕಿದ್ದಾರೆ.

ಹೀರಾಪುರಕ್ಕೆ ಕರೆದುಕೊಂಡು ಹೋಗಿ, ಒಂದು ತಿಂಗಳ ಕಾಲ ಬಂಧಿಸಿಟ್ಟಿದ್ದರು. ಇಬ್ಬರು ಅತ್ಯಾಚಾರವೆಸಗಿದ್ದಾರೆ. ದೈಹಿಕ ಹಿಂಸೆ ನೀಡಿದ್ದಾರೆ.  ಅಲ್ಲಿಂದ ಕೋಟಾಕ್ಕೆ ಕರೆದೊಯ್ದು, ವಿವಾಹದ ಛಾಪಾ ಕಾಗದದ ಮೇಲೆ ಸಹಿ  ಹಾಕಿಕೊಂಡಿದ್ದಾರೆ. ಅವರ ಮಾತನ್ನ ಕೇಳದಿದ್ದರೆ, ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಪುನಃ ಹೀರಾಪುರಕ್ಕೆ ಕರೆದೊಯ್ದು, ಬಂಧಿಸಿಟ್ಟಿದ್ದರು.

ಮಗಳು ಕಳೆದುಹೋಗಿದ್ದಾಳೆ ಎಂದು ಆಕೆಯ ಪಾಲಕರು ದೂರು ನೀಡಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಬಳಿಕ, ಸಂತ್ರಸ್ಥೆ ಬಂಧನದಿಂದ ತಪ್ಪಿಸಿಕೊಂಡು ಪಾಲಕರಿಗೆ ತಿಳಿಸಿ, ಪೊಲೀಸರ ನೆರವು ಕೋರಿದ್ದಾರೆ. ಪೋಲೀಸರು ಅಹವಾಲು ತೆಗೆದುಕೊಳ್ಳದ ಕಾರಣ, ಸಂತ್ರಸ್ಥೆ ಮಾಧ್ಯಮದ ಮೊರೆ ಹೋಗಿದ್ದು, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ನನ್ನ ಅಹವಾಲನ್ನು ಕೇಳಲಿ ಎಂದು ಆಗ್ರಹಿಸಿದ್ದಾಳೆ.