Thursday, 7th November 2024

Rahul Gandhi: ರಾಹುಲ್‌ ಗಾಂಧಿ ಕಾರ್ಯಕ್ರಮದಲ್ಲಿ ಖಾಲಿ ಪುಟಗಳ ಸಂವಿಧಾನ ಪುಸ್ತಕ ವಿತರಣೆ! ವೈರಲಾಗಿರುವ ವಿಡಿಯೋದಲ್ಲೇನಿದೆ?

Rahul gandhi

ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಸಂದರ್ಭಗಳಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ಸದಾ ಕೈಯಲ್ಲಿ ಸಂವಿಧಾನದ ಪ್ರತಿಯೊಂದನ್ನು ಹಿಡಿದುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಅವರು ಈ ನಡೆ ಬಗ್ಗೆ ಸಂಸತ್‌ನಲ್ಲೂ ಭಾರೀ ಚರ್ಚೆಯನ್ನು ಸೃಷ್ಟಿಸಿತ್ತು. ಒಮ್ಮೆ ಸದಾ ಕೈಯಲ್ಲಿ ಹೊತ್ತು ತಿರುಗುವ ಸಂವಿಧಾನದ ಪುಸ್ತಕದಲ್ಲಿ ಎಷ್ಟು ಪುಟಗಳಿವೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಾಗದೇ ರಾಹುಲ್‌ ನುಣುಚಿಕೊಂಡ ಘಟನೆಯೂ ನಡೆದಿತ್ತು. ಇದೀಗ ಇದೇ ಸಂವಿಧಾನ ಪುಸ್ತಕ ಮತ್ತೊಮ್ಮೆ ಚರ್ಚೆಗೆ ಬಂದಿದೆ. ರಾಹುಲ್ ಗಾಂಧಿ ನೇತೃತ್ವದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷವು “ಸಂವಿಧಾನದ ಖಾಲಿ ಪ್ರತಿಗಳನ್ನು(Blank copies of the Constitution) ಹಂಚುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೇ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನೂ ಬಿಜೆಪಿ ಹಂಚಿಕೊಂಡಿದ್ದು, ಇದೀಗ ಭಾರೀ ವೈರಲ್‌ ಆಗುತ್ತಿದೆ.

ವೈರಲಾಗಿರುವ ವಿಡಿಯೋದಲ್ಲೇನಿದೆ?

ಮಹಾರಾಷ್ಟ್ರದ ನಾಗ್ಪುರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷವು “ಸಂವಿಧಾನದ ಖಾಲಿ ಪ್ರತಿಗಳನ್ನು ಹಂಚುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಮಹಾರಾಷ್ಟ್ರ ಬಿಜೆಪಿಯು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊ, ತ್ವರಿತವಾಗಿ ವೈರಲ್ ಆಗಿದ್ದು, ಪುಸ್ತಕಗಳ ಮುಂಭಾಗದಲ್ಲಿ ‘ಭಾರತದ ಸಂವಿಧಾನ’ ಎಂದು ಬರೆಯಲಾಗಿದೆ. ಆದರೆ ಮೊದಲ ಪುಟದಲ್ಲಿ ಮುನ್ನುಡಿಯನ್ನು ಹೊರತುಪಡಿಸಿ ಉಳಿದೆಲ್ಲಾ ಪುಟಗಳು ಖಾಲಿಯಾಗಿವೆ.

ಕಾಂಗ್ರೆಸ್ ಈ ರೀತಿಯಾಗಿ ಭಾರತದ ಸಂವಿಧಾನವನ್ನು ಅಳಿಸಲು ಬಯಸಿದೆ. ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಎಲ್ಲಾ ಕಾನೂನುಗಳನ್ನು ಅಳಿಸಬೇಕು. ಅದಕ್ಕಾಗಿಯೇ ಮೀಸಲಾತಿಯನ್ನು ರದ್ದುಗೊಳಿಸಲಾಗುವುದು ಎಂದು ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದರು ಎಂದು ಮಹಾರಾಷ್ಟ್ರ ಬಿಜೆಪಿ ಟ್ವೀಟ್ ಮಾಡಿದೆ.

ಬಿಜೆಪಿ ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು

ಇನ್ನು ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ಇದು ಸುಳ್ಳು ಸುದ್ದಿ ಎಂದು ಹೇಳಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ನೋಟ್‌ಬುಕ್ ಮತ್ತು ಪೆನ್ ನೀಡಲಾಗಿದೆ. ಅದನ್ನು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯು ಮೂಲೆಯಲ್ಲಿದೆ. ಆಡಳಿತಾರೂಢ ಬಿಜೆಪಿಯು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ದಾಳಿ ಮಾಡಲು ಈ ವಿಷಯವನ್ನು ತಿರುಚಿ ಜನರ ದಾರಿ ತಪ್ಪಿಸುತ್ತಿದೆ.