Friday, 22nd November 2024

Rahul Gandhi:‌ ಸೈಂಟ್‌ ಫ್ರಾನ್ಸಿಸ್ ಕ್ಸೇವಿಯರ್‌ಗೆ ಅಪಮಾನ; ಬಿಜೆಪಿ, RSS ವಿರುದ್ಧ ರಾಹುಲ್‌ ಗಾಂಧಿ ಅಕ್ರೋಶ- ಏನಿದು ವಿವಾದ?

Rahul Gandhi

ನವದೆಹಲಿ: ಗೋವಾದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಆರೆಸ್ಸೆಸ್ ನಾಯಕ ಸುಭಾಷ್ ವೆಲಿಂಗ್ಕರ್(Subhash Velingkar) ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಕಿಡಿ ಕಾರಿದ್ದಾರೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೋವಾದಲ್ಲಿ ಉದ್ದೇಶಪೂರ್ವಕವಾಗಿ ಕೋಮು ಉದ್ವಿಗ್ನತೆಯನ್ನು ಉಂಟುಮಾಡುತ್ತಿದೆ ಆರೋಪಿಸಿದ್ದಾರೆ.

X ನಲ್ಲಿ ಸುದೀರ್ಘ ಪೋಸ್ಟ್‌ ಮಾಡಿದ್ದ ರಾಹುಲ್‌ ಗಾಂಧಿ, “ಗೋವಾದ ಆಕರ್ಷಣೆಯು ಅದರ ನೈಸರ್ಗಿಕ ಸೌಂದರ್ಯ ಮತ್ತು ಅದರ ವೈವಿಧ್ಯಮಯ ಮತ್ತು ಸಾಮರಸ್ಯದ ಜನರ ಪ್ರೀತಿ ಮತ್ತು ಆತಿಥ್ಯದಲ್ಲಿದೆ. ದುರದೃಷ್ಟವಶಾತ್, ಬಿಜೆಪಿ ಆಡಳಿತದಲ್ಲಿ, ಈ ಸಾಮರಸ್ಯದ ಮೇಲೆ ದಾಳಿ ನಡೆಯುತ್ತಿದೆ. ಭಾರತದಾದ್ಯಂತ, ಸಂಘ ಪರಿವಾರದ ಇದೇ ರೀತಿಯ ಕ್ರಮಗಳು ನಿರ್ಭೀತಿಯಿಂದ ನಡೆಯುತ್ತಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋವಾದಲ್ಲಿ, ಬಿಜೆಪಿಯ ತಂತ್ರವು ಸ್ಪಷ್ಟವಾಗಿದೆ. ಇಲ್ಲಿನ ಜನರನ್ನು ವಿಭಜಿಸುವುದು, ಗೋವಾದ ನೈಸರ್ಗಿಕ ಮತ್ತು ಸಾಮಾಜಿಕ ಪರಂಪರೆಯ ಮೇಲಿನ ದಾಳಿ ಮಾಡುವುದೇ ಬಿಜೆಪಿಯ ಗುರಿಯಾಗಿದೆ. ಆದರೆ ಗೋವಾ ಮತ್ತು ಇಡೀ ಭಾರತದ ಜನರು ಬಿಜೆಪಿಯ ಈ ನೀತಿಯ ವಿರುದ್ಧ ಒಗ್ಗಟ್ಟಿನಿಂದ ನಿಂತಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಏನಿದು ವಿವಾದ?

ವೆಲಿಂಗ್ಕರ್ ಅವರು ಗೋವಾದ ವಿಶ್ವ ವಿಖ್ಯಾತ ಚರ್ಚ್‌ನಲ್ಲಿರುವ ಸೈಂಟ್‌ ಕ್ಸೇವಿಯರ್‌ ಅವಶೇಷಗಳ “ಡಿಎನ್ಎ ಪರೀಕ್ಷೆ ನಡೆಸಬೇಕೆಂದು ಕರೆ ನೀಡಿದ ನಂತರ ವಿವಾದ ಭುಗಿಲೆದ್ದಿತು. ಅಲ್ಲದೇ ಫ್ರಾನ್ಸಿಸ್ ಕ್ಸೇವಿಯರ್‌ನನ್ನು ಗೋವಾದ ರಕ್ಷಕ ಎಂದು ಕರೆಯುವುದನ್ನು ಪ್ರಶ್ನಿಸಿದ್ದಾರೆ. ಅವರು ಈ ಹೇಳಿಕೆ ರಾಜ್ಯದ ಕ್ರಿಶ್ಚಿಯನ್ ಸಮುದಾಯದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಇದು ಪ್ರತಿಭಟನೆಗಳಿಗೆ ಕಾರಣವಾಗಿದೆ.

ಸ್ಥಳೀಯ ರಾಜಕೀಯ ಮುಖಂಡರು ಮತ್ತು ನಾಗರಿಕರು ಭಾನುವಾರ ಹಳೆ ಗೋವಾದಲ್ಲಿ ಪ್ರತಿಭಟನೆ ನಡೆಸಿದರು, ವೆಲಿಂಗ್ಕರ್ ಅವರ ಪ್ರಚೋದಕ ಹೇಳಿಕೆಗಳಿಗಾಗಿ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನಾಕಾರರು ಪೊಲೀಸರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ವೆಲಿಂಗ್ಕರ್ ವಿರುದ್ಧ ಎಫ್‌ಐಆರ್

ಶುಕ್ರವಾರ, ಬಿಚೋಲಿಮ್ ಪೊಲೀಸರು ವೆಲಿಂಗ್ಕರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 299 ರ ಅಡಿಯಲ್ಲಿ ಧಾರ್ಮಿಕ ಭಾವನೆಗಳನ್ನು ಧಕ್ಕೆ ಪ್ರಕರಣವನ್ನು ದಾಖಲಿಸಿದ್ದಾರೆ. ಸದ್ಯ ಅವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ತಲಾಶ್‌ ನಡೆಸುತ್ತಿದ್ದಾರೆ. ಇನ್ನು ಈ ಬಗ್ಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪ್ರತಿಕ್ರಿಯಿಸಿದ್ದು, ಸಾರ್ವಜನಿಕರು ಶಾಂತವಾಗಿರಲು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Saif Ali Khan: ರಾಹುಲ್‌ ಗಾಂಧಿ ಒಬ್ಬ ಪ್ರಾಮಾಣಿಕ, ಧೈರ್ಯಶಾಲಿ ರಾಜಕಾರಣಿ; ಹಾಡಿ ಹೊಗಳಿದ ನಟ ಸೈಫ್‌