Friday, 22nd November 2024

Rahul Gandhi: ರಾಹುಲ್‌ ಗಾಂಧಿ ಕಡೆಯಿಂದ ರಾಯ್‌ಬರೇಲಿಯ ಕ್ಷೌರಿಕನಿಗೆ ಸಿಕ್ತು ಭರ್ಜರಿ ಉಡುಗೊರೆ; ಕಾರಣವೇನು?

Rahul Gandhi

ಲಕ್ನೋ: ಲೋಕಸಭಾ ಚುನಾವಣೆ(Lok Sabha election)ಯ ಪ್ರಚಾರದ ವೇಳೆ ತಮ್ಮ ಗಡ್ಡ ಮತ್ತು ಕೂದಲನ್ನು ಟ್ರಿಮ್‌ ಮಾಡಿದ ಕ್ಷೌರಿಕನಿಗೆ ಕಾಂಗ್ರೆಸ್‌ ಮುಖಂಡ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಉಡುಗೊರೆಗಳನ್ನು ಕಳುಹಿಸಿಕೊಟ್ಟಿದ್ದಾರೆ. ಉತ್ತರ ಪ್ರದೇಶದ ಬ್ರಿಜೇಂದ್ರ ನಗರದಲ್ಲಿರುವ ಕ್ಷೌರಿಕ ಮಿಥುನ್‌ ಅವರಿಗೆ ರಾಹುಲ್‌ ಗಾಂಧಿ ಈ ಉಡುಗೊರೆ ನೀಡಿದ್ದಾರೆ.

ಸದ್ಯ ಉಡುಗೊರೆ ಸ್ವೀಕರಿಸಿದ ಮಿಥುನ್‌ ಈ ಬಗ್ಗೆ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ರಾಯ್‌ಬರೇಲಿ ಸಂಸದ ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮೇ 13ರಂದು ಲಾಲ್‌ಗಂಜ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಹೊರಡುವಾಗ ಅವರು ಬ್ರಿಜೇಂದ್ರ ನಗರದಲ್ಲಿರುವ ಕ್ಷೌರಿಕ ಮಿಥುನ್ ಅವರ ಅಂಗಡಿಯಲ್ಲಿ ಗಡ್ಡವನ್ನು ಟ್ರಿಮ್‌ ಮಾಡಿಕೊಂಡಿದ್ದರು.

ಸುಮಾರು 3 ತಿಂಗಳ ಬಳಿಕ ರಾಹುಲ್‌ ಗಾಂಧಿ ಉಡುಗೊರೆ ಕಳುಹಿಸಿದ್ದಾಗಿ ಮಿಥುನ ಶುಕ್ರವಾರ (ಸೆಪ್ಟೆಂಬರ್‌ 13) ತಿಳಿಸಿದ್ದಾರೆ. “ಗುರುವಾರ ಇದ್ದಕ್ಕಿದ್ದಂತೆ ನನ್ನ ಅಂಗಡಿಯ ಬಳಿ ವಾಹನವೊಂದು ಬಂದು ನಿಂತಿತ್ತು. ಇಬ್ಬರು ಆ ವಾಹನದಿಂದ ಎರಡು ಕುರ್ಚಿಗಳು, ಇನ್ವರ್ಟರ್ ಸೆಟ್ ಇತ್ಯಾದಿಗಳನ್ನು ಇಳಿಸಿ ನನಗೆ ಹಸ್ತಾಂತರಿಸಿದರು” ಎಂದು ಮಿಥುನ್ ವಿವರಿಸಿದ್ದಾರೆ. ರಾಹುಲ್‌ ಗಾಂಧಿ ಈ ಉಡುಗೊರೆ ಕಳುಹಿಸಿದ್ದಾರೆ ಎನ್ನುವುದು ಬಳಿಕ ತಿಳಿದು ಬಂತು. ಈ ಉಡುಗೊರೆ ನಿರೀಕ್ಷಿಸಿಯೇ ಇರಲಿಲ್ಲ ಎಂದು ಅವರು ಖುಷಿಯನ್ನು ಹಂಚಿಕೊಂಡಿದ್ದಾರೆ.

ಉತ್ತರ ಪ್ರದೇಶದ ಕಾಂಗ್ರೆಸ್ ವಕ್ತಾರ ಅಂಶು ಅವಸ್ಥಿ ಮಾತನಾಡಿ, “ರಾಹುಲ್ ಗಾಂಧಿ ಯಾವಾಗಲೂ ಸಮಾಜದ ವಿವಿಧ ವರ್ಗದ ಜನರನ್ನು ಭೇಟಿಯಾಗುತ್ತಾರೆ. ಅವರ ಅಗತ್ಯ ಮತ್ತು ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಯ್‌ಬರೇಲಿಯ ಲಾಲ್‌ಗಂಜ್‌ನಲ್ಲಿರುವ ಮಿಥುನ್ ಅವರ ಸಲೂನ್‌ನಲ್ಲಿ ರಾಹುಲ್ ಗಾಂಧಿ ತಮ್ಮ ಕೂದಲು ಮತ್ತು ಗಡ್ಡವನ್ನು ಟ್ರಿಮ್‌ ಮಾಡಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಅಗತ್ಯ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ಕಳುಹಿಸಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯ” ಎಂದು ತಿಳಿಸಿದ್ದಾರೆ. ರಾಯ್‌ಬರೇಲಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಪಂಕಜ್ ತಿವಾರಿ ಮಾತನಾಡಿ, “ರಾಹುಲ್‌ ಗಾಂಧಿ ಅವರು ಉಡುಗೊರೆ ಕಳುಹಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಇದು ಮಾದರಿ ನಡೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ಮೊದಲ ಸಲವಲ್ಲ

ರಾಹುಲ್‌ ಗಾಂಧಿ ಸಾಮಾನ್ಯ ವರ್ಗದ ಜನರಿಗೆ ಉಡುಗೊರೆ ನೀಡುತ್ತಿರುವುದು ಇದು ಮೊದಲ ಸಲವೇನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಹಲವರಿಗೆ ಅಗತ್ಯ ವಸ್ತುಗಳನ್ನು ನೀಡಿ ನೆರವಾಗಿದ್ದಾರೆ. ಜುಲೈ 26ರಂದು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾದ ನಂತರ ಸುಲ್ತಾನ್ಪುರದಿಂದ ಲಕ್ನೋಗೆ ಹಿಂದಿರುಗುವಾಗ ರಾಹುಲ್ ಗಾಂಧಿ ಸುಲ್ತಾನ್ಪುರದ ಹೊರವಲಯದಲ್ಲಿರುವ ವಿಧಾಯಕ್ ನಗರದಲ್ಲಿರುವ ರಾಮ್ ಚೇಟ್ ಅವರ ಅಂಗಡಿಗೆ ಅನಿರೀಕ್ಷಿತ ಭೇಟಿ ನೀಡಿದ್ದರು. ಮಾರನೇ ದಿನ ರಾಮ್ ಚೇತ್ ಅವರಿಗೆ ಹೊಲಿಗೆ ಯಂತ್ರವನ್ನು ಕಳುಹಿಸಿಕೊಟ್ಟಿದ್ದರು.

ಈ ಸುದ್ದಿಯನ್ನೂ ಓದಿ: Rahul Gandhi: INDI ಅಲಯನ್ಸ್ ಅಥವಾ INDIA ಅಲಯನ್ಸ್? ವಿದ್ಯಾರ್ಥಿಯ ಪ್ರಶ್ನೆಗೆ ತಡವರಿಸಿದ ರಾಹುಲ್‌ ಗಾಂಧಿ- ಈ ವಿಡಿಯೋ ಭಾರೀ ವೈರಲ್‌