Friday, 22nd November 2024

Rahul Gandhi: ಚುನಾವಣಾ ಪ್ರಚಾರ ಮುಗಿಸಿ ಜಿಪ್‌ಲೈನ್‌ ಸಾಹಸಲ್ಲಿ ಭಾಗಿಯಾದ ರಾಹುಲ್‌ ಗಾಂಧಿ; ವೈರಲ್‌ ವಿಡಿಯೊ ಇಲ್ಲಿದೆ

Rahul Gandhi

ತಿರುವನಂತಪುರಂ: ಲೋಕಸಭಾ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ (Rahul Gandhi) ಅವರ ಜಿಪ್‌ಲೈನ್‌ (Zipline) ಸಾಹಸದ ವಿಡಿಯೊವೊಂದು ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ (Viral Video). ಖುದ್ದು ರಾಹುಲ್‌ ಗಾಂಧಿ ಅವರು ವಿಡಿಯೊವನ್ನು ತಮ್ಮ ಯೂಟ್ಯೂಬ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಯನಾಡಿನ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತಮ್ಮ ಸಹೋದರಿ ಪ್ರಿಯಾಂಕ ಗಾಂಧಿ ಪರ ಬಹಿರಂಗ ಮತಪ್ರಚಾರವನ್ನು ಮುಗಿಸಿದ ರಾಹುಲ್‌ ಗಾಂಧಿ ವಯನಾಡಿನ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಮಂಗಳವಾರ (ನ. 12) ಅಲ್ಲಿನ ಅತೀ ಉದ್ದದ ಜಿಪ್‌ಲೈನ್‌ ಸಾಹಸದಲ್ಲಿ ಹುರುಪಿನಿಂದ ಭಾಗಿಯಾಗಿದ್ದಾರೆ. ತಮ್ಮ ನಾಯಕನ ಸಾಹಸ ನೋಡಿ ಅಭಿಮಾನಿಗಳು ಫುಲ್ ಫಿದಾ ಅಗಿದ್ದಾರೆ.

“ಭೂ ಕುಸಿತದಂತಹ ಸವಾಲುಗಳ ನಡುವೆಯೂ ವಯನಾಡು ಅದ್ಭುತ ಪ್ರವಾಸಿ ಸ್ಥಳವಾಗಿ ಗಮನ ಸೆಳೆಯುತ್ತಿದೆ” ಎಂದು ವಿಡಿಯೊದಲ್ಲಿ ರಾಹುಲ್‌ ಗಾಂಧಿ ತಿಳಿಸಿದ್ದಾರೆ. ಜಿಪ್‌ಲೈನ್‌ ಸಾಹಸ ಮುಗಿಸಿದ ನಂತರ ಮಾತನಾಡಿದ ಅವರು, “ಪ್ರಿಯಾಂಕ ಪರ ಚುನಾವಣೆ ಪ್ರಚಾರ ನಡೆಸಿದ ನಂತರ ಭೂ ಕುಸಿತಕ್ಕೊಳಗಾದ ಪ್ರದೇಶದ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ಇಲ್ಲಿನ ಜನರು ನಿಜಕ್ಕೂ ಸ್ಫೂರ್ತಿದಾಯಕರು. ಪ್ರಾಕೃತಿಕ ವಿಕೋಪದಂತಹ ಸವಾಲುಗಳ ನಡುವೆಯೂ ಇಲ್ಲಿನ ಜನರು ಧೃತಿಗೆಡದೆ ಬದುಕುತ್ತಿದ್ದಾರೆ. ಇಲ್ಲಿನ ವಾತಾವರಣ ಅದ್ಭುತವಾಗಿದೆ. ದಕ್ಷಿಣ ಭಾರತದ ಅತೀ ದೊಡ್ಡ ಡ್ರಾಪ್‌ ಟವರ್‌, ವಿಸ್ಮಯ ಮತ್ತು ರೋಮಾಂಚನಕಾರಿ ಜಿಪ್‌ಲೈನ್‌ ಸೇರಿದಂತೆ ಹಲವು ಅದ್ಭುತ ಪ್ರವಾಸಿ ಸೌಲಭ್ಯ ಇಲ್ಲಿದೆ. ನಾನು ಕೂಡ ಜಿಪ್‌ಲೈನ್‌ ಸಾಹಸದಲ್ಲಿ ಭಾಗಿಯಾದೆ. ಅಲ್ಲಿನ ಪ್ರತಿ ಕ್ಷಣವನ್ನೂ ಖುಷಿಯಿಂದ ಅನುಭವಿಸಿದ್ದೇನೆ” ಎಂದಿದ್ದಾರೆ.

ಜಿಪ್‌ಲೈನ್‌ ಸಾಹಸದಲ್ಲಿ ಭಾಗವಹಿಸುವಂತೆ ರಾಹುಲ್‌ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ಅವರನ್ನು ಆಹ್ವಾನಿಸಿದ್ದರು. ಸೀರೆ ಧರಿಸಿದ್ದ ಪ್ರಿಯಾಂಕಾ ಹಿಂದೇಟು ಹಾಕಿದ್ದರು. ನಿರಂತರ ಮಳೆ ಮತ್ತು ಭೂಕುಸಿತದಿಂದಾಗಿ ಈ ವರ್ಷದ ಜುಲೈನಲ್ಲಿ ವಯನಾಡಿನಲ್ಲಿ 400ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ವಯನಾಡಿನ ವೈತಿರಿ, ಮೆಪ್ಪಾಡಿ, ವೆಳ್ಳರಿಮಲ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸಿತ್ತು. ಜನರು ತಮ್ಮ ಜೀವ ಉಳಿಸಿಕೊಳ್ಳಲು ಪರದಾಡಿದ್ದರು. ವಯನಾಡಿನ ಜನರ ಅಸಹಾಯಕ ಸ್ಥಿತಿ ಕಂಡು ಹಲವರು ನಿಧಿ ಸಂಗ್ರಹಿಸಿ ಸಹಾಯ ಹಸ್ತವನ್ನೂ ಚಾಚಿದ್ದರು. ಈಗ ಅಲ್ಲಿನ ಪರಿಸ್ಥಿತಿ ಸುಧಾರಿಸಿದೆ. ಕಷ್ಟಗಳ ನಡುವೆಯೂ ಜನರು ಧೈರ್ಯದಿಂದ ಜೀವನ ನಡೆಸುತ್ತಿದ್ದಾರೆ.

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ರಾಹುಲ್‌ ಗಾಂಧಿ ಉತ್ತರ ಪ್ರದೇಶದ ರಾಯ್‌ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಆ ಮೂಲಕ ಆ ಪ್ರಿಯಾಂಕಾ ಗಾಂಧಿ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ತಂಗಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದೇ ಮೊದಲ ಬಾರಿಗೆ ವಯನಾಡು ಕ್ಷೇತ್ರದಿಂದ ಚುನಾವಣೆ ಎದುರಿಸುತ್ತಿರುವ ಪ್ರಿಯಾಂಕಾ ಅವರು ಗೆಲುವನ್ನು ನಿರೀಕ್ಷಿಸಿದ್ದಾರೆ. ವಯನಾಡಿನಲ್ಲಿ ಕಾಂಗ್ರೆಸ್‌ ಗೆಲ್ಲುವುದು ಖಚಿತ ಎಂಬುದನ್ನು ಚುನಾವಣಾ ತಜ್ಞರು ಊಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Rahul Gandhi: ಕಾರ್ಮಿಕರೊಂದಿಗೆ ಬಂಗಲೆಗೆ ಬಣ್ಣ ಬಳಿದು, ಮಡಿಕೆ ತಯಾರಿಸಿದ ರಾಹುಲ್‌ ಗಾಂಧಿ; ಕಾಂಗ್ರೆಸ್‌ ನಾಯಕನ ಸರಳತೆಗೆ ಜೈ ಎಂದ ನೆಟ್ಟಿಗರು