Monday, 7th October 2024

Rahul Gandhi: ದಲಿತರ ಮನೆಯಲ್ಲಿ ರಾಹುಲ್‌ ಗಾಂಧಿ ನಳಪಾಕ! ವಿಡಿಯೋ ಹಂಚಿಕೊಂಡು ಮೋದಿಗೆ ತಿವಿದ ಸಿಎಂ ಸಿದ್ದು

Rahul Gandhi

ಮುಂಬೈ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi)ಯವರು ಮಹಾರಾಷ್ಟ್ರದಲ್ಲಿ ದಲಿತರ ಮನೆಗೆ ಭೇಟಿ ನೀಡಿ ಅವರ ಜತೆಗೂಡಿ ಅಡುಗೆ ಮಾಡಿ ಊಟವನ್ನು ಸವಿಯುವ ಮೂಲಕ ಸುದ್ದಿ ಮಾಡಿದ್ದಾರೆ. ರಾಹುಲ್ ಗಾಂಧಿ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದಲಿತ ಕುಟುಂಬದವರೊಂದಿಗೆ ಸೇರಿ ಅಡುಗೆ ಮಾಡಿ ಅಲ್ಲೇ ಊಟ ಸವಿದಿದ್ದಾರೆ. ಈ ವೀಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲೂ ಅವರು ಹಂಚಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಅ.5 ರಂದು ಮಹಾರಾಷ್ಟ್ರದ ಕೊಲ್ಲಾಪುರದ ಅಜಯ್ ತುಕಾರಾಂ ಸನಡೆ ಮತ್ತು ಅಂಜನಾ ತುಕಾರಾಂ ಸನಡೆ ದಂಪತಿಯ ನಿವಾಸಕ್ಕೆ ರಾಹುಲ್‌ ಭೋಜನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಪಾಕ ಪದ್ಧತಿ, ಅವರ ಊಟ ಹೇಗಿರುತ್ತದೆ ಎನ್ನುವ ಮಹತ್ವವನ್ನು ತಿಳಿದುಕೊಂಡರು ಅವರ ಕುಟುಂಬದವರೊಂದಿಗೆ ಸೇರಿ ಮಸಾಲೆ ಭರಿತ ಊಟವನ್ನು ಮಾಡಿ, ತಾವೂ ಸವಿದರು. ಈ ವೇಳೆ ರಾಹುಲ್ ಗಾಂಧಿಯವರ ಜತೆ `ದಲಿತ್ ಕಿಚನ್ಸ್ ಆಫ್ ಮರಾಠವಾಡ’ ಪುಸ್ತಕದ ಲೇಖಕ ಶಾಹು ಪಟೋಲೆ ಅವರು ಜೊತೆಗಿದ್ದರು.

ಮೊದಲಿಗೆ ರಾಹುಲ್ ಗಾಂಧಿ ಕೊಲ್ಲಾಪುರದಲ್ಲಿ ದಲಿತ ಕುಟುಂಬವನ್ನು ಭೇಟಿಯಾಗಿ ಖುದ್ದು ಅವರ ಅಡುಗೆ ಮನೆಗೆ ತೆರಳಿ, ಅಡುಗೆ ಮನೆಯಲ್ಲಿ ಅಡುಗೆಯೂ ಮಾಡಿ ಸವಿದಿದ್ದಾರೆ. ಈ ವೇಳೆ ಅವರು ಜಾತಿ ತಾರತಮ್ಯ, ಅಸ್ಪೃಶ್ಯತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಯೂ ನಡೆಸಿದ್ದಾರೆ. ನಿಮ್ಮ ದೈನಂದಿನ ಊಟ ಏನು? ಅಡುಗೆ ಪದ್ಧತಿ ಹೇಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಅದನ್ನು ತಿಳಿಯಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ ಎಂದರು. ದಲಿತರು ಸಮಾಜದಲ್ಲಿ ಎದುರಿಸುತ್ತಿರುವ ತಾರತಮ್ಯದ ಸಮಸ್ಯೆ ಹೀಗೆ ಬೇರೆ ವಿಷಯಗಳ ಕುರಿತು ಮಾತನಾಡಿದರು. ನಾನಿರುವ ಸ್ಥಾನವನ್ನು ಜನರು ಗೌರವಿಸುತ್ತಾರೆ. ಆದರೆ ನಾನು ಜಾತಿಯನ್ನು ಗೌರವಿಸುವುದಿಲ್ಲ ಎಂದರು.

ವಿಡಿಯೋ ಹಂಚಿಕೊಂಡ ಸಿಎಂ ಸಿದ್ದು

ಇನ್ನು ರಾಹುಲ್‌ ಗಾಂಧಿಯವರ ಈ ವಿಶೇಷ ವಿಡಿಯೋವನ್ನು ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಲಿತರ ಊಟದೆಡೆಗೆ ಅವಜ್ಞೆಯಷ್ಟೇ ಅಲ್ಲ, ತೀವ್ರ ಅಸಹನೆಯನ್ನೂ ಬೆಳೆಸಿಕೊಂಡಿರುವ ಸಮಾಜ ನಮ್ಮದು. ದಲಿತರ ಕೈಯಿಂದ ತಯಾರಿಸಿದ ಅಡುಗೆಯ ಸೇವನೆ ಇರಲಿ, ಅವರು ಊಟಕ್ಕೆ ಬಳಸುವ ಪಾತ್ರೆ ಮುಟ್ಟಿದರೂ ಅದನ್ನು ಮೈಲಿಗೆ ಎಂದು ಕರೆಯುವ ಮನಸ್ಥಿತಿ ಇಂದಿಗೂ ನಮ್ಮಲ್ಲಿ ವ್ಯಾಪಕವಾಗಿದೆ ಎಂದಿದ್ದಾರೆ

ಮಹಾರಾಷ್ಟ್ರದ ಮರಾಠವಾಡದ ದಲಿತ ಆಹಾರ ಸಂಸ್ಕೃತಿಯನ್ನು ಕಟ್ಟಿಕೊಟ್ಟಿರುವ ಲೇಖಕ ಶಾಹೂ ಪಟೋಲೆ ಅವರೊಂದಿಗೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಅಡುಗೆ ತಯ್ಯಾರಿಯಲ್ಲಿ ಭಾಗಿಯಾಗಿ, ಊಟದೊಟ್ಟಿಗೆ ನಡೆಸಿದ ಆಹಾರ ಸಂಸ್ಕೃತಿಯ ಚರ್ಚೆ ಅವರು ತಯಾರಿಸಿದ ಆಹಾರಾದಷ್ಟೇ ಚೇತೋಹಾರಿಯಾಗಿದೆ. ಇಂದು ನಮಗೆ ಸಾಮಾಜಿಕವಾಗಿ ಬೇಕಾಗಿರುವುದು ‘ಚಾಯ್‌ ಪೇ ಚರ್ಚಾ’ದಂತಹ ಬೀಡಾಡಿ ಚರ್ಚೆಗಳಲ್ಲ, ನಮ್ಮೆಲ್ಲರನ್ನು ಬೆಸೆಯುವಂತಹ, ಚಿಂತನೆಗೆ ಹಚ್ಚುವಂತಹ ಆಹಾರ ಸಂಸ್ಕೃತಿಯಂತಹ ಮೌಲಿಕ ಚರ್ಚೆಗಳು ಎಂದು ಪ್ರಧಾನಿ ಮೋದಿಗೆ ಹಾಗೂ ಬಿಜೆಪಿ ಪರೋಕ್ಷವಾಗಿ ಟಾಂಗ್‌ ಕೊಟ್ಟರು.

ಈ ಸುದ್ದಿಯನ್ನೂ ಓದಿ: Rahul Gandhi:‌ ಸೈಂಟ್‌ ಫ್ರಾನ್ಸಿಸ್ ಕ್ಸೇವಿಯರ್‌ಗೆ ಅಪಮಾನ; ಬಿಜೆಪಿ, RSS ವಿರುದ್ಧ ರಾಹುಲ್‌ ಗಾಂಧಿ ಅಕ್ರೋಶ- ಏನಿದು ವಿವಾದ?