Saturday, 14th December 2024

ಅಮೇಥಿಯಲ್ಲಿ ರಾಹುಲ್‌ ಗಾಂಧಿ, ರಾಯ್ ಬರೇಲಿಯಿಂದ ಪ್ರಿಯಾಂಕಾ ಸ್ಪರ್ಧಿಸುವುದು ಖಚಿತ…!

ವದೆಹಲಿ: ಉತ್ತರಪ್ರದೇಶದ ಲೋಕಸಭಾ ಕ್ಷೇತ್ರಗಳಾದ ಅಮೇಥಿಯಲ್ಲಿ ರಾಹುಲ್‌ ಗಾಂಧಿ ಮತ್ತು ರಾಯ್ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ರಾಹುಲ್‌ ಗಾಂಧಿ ಅವರು ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸುತ್ತಿದ್ದು, ಏ.26ರಂದು ಮತದಾನ ನಡೆಯಲಿದೆ.

ಬಳಿಕ ಅಮೇಥಿಯಲ್ಲಿ ರಾಹುಲ್‌ ಗಾಂಧಿ ಸ್ಪರ್ಧಿಸುವುದರ ಬಗ್ಗೆ ಅಧಿಕೃತ ಘೋಷಣೆ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಹಾಗೆಯೇ ರಾಯ್‌ಬರೇಲಿ ಯಿಂದ ಸ್ಪರ್ಧಿಸುತ್ತಿದ್ದ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.

ಈ ಬೆನ್ನಲ್ಲೇ ರಾಯ್‌ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಅಥವಾ ಅವರ ಪತಿ ರಾಬರ್ಟ್‌ ವಾದ್ರಾ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ರಾಹುಲ್‌ ಗಾಂಧಿ ಅವರು ಅಮೇಥಿ ಕ್ಷೇತ್ರದಿಂದಲೂ ಸ್ಪರ್ಧಿಸುವ ಕುರಿತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಸ್ಪಷ್ಟಪಡಿಸಿದ್ದರು. ಸಮಾಜವಾದಿ ಪಕ್ಷವು ಇಂಡಿಯಾ ಒಕ್ಕೂಟದ ಭಾಗವಾಗಿರುವ ಕಾರಣ ಅಖಿಲೇಶ್‌ ಯಾದವ್‌ ಅವರ ಹೇಳಿಕೆಯು ಪ್ರಾಮುಖ್ಯತೆ ಪಡೆದಿದೆ.

ಮೂಲಗಳ ಪ್ರಕಾರ ಉತ್ತರ ಪ್ರದೇಶದ ಎರಡು ಕ್ಷೇತ್ರಗಳ ಅಂತಿಮ ನಿರ್ಧಾರವನ್ನು ಏ.26ರ ನಂತರ ತೆಗೆದುಕೊಳ್ಳಲಾಗುವುದು ಮತ್ತು ಮುಂದಿನ ವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.