ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವ ಅನರ್ಹತೆಯನ್ನು ಸೋಮವಾರ ರದ್ದುಪಡಿಸಲಾಗಿದ್ದು, ರಾಹುಲ್ ಗಾಂಧಿ ತಮ್ಮ ಟ್ವಿಟರ್ ಬಯೋವನ್ನು ಬದಲಿಸಿದ್ದಾರೆ.
ಮಾರ್ಚ್ನಲ್ಲಿ ಲೋಕಸಭೆಯಿಂದ ಅನರ್ಹಗೊಂಡ ನಂತರ, ರಾಹುಲ್ ಗಾಂಧಿ ಅವರು ತಮ್ಮ ಟ್ವಿಟರ್ ಬಯೋವನ್ನು ‘Dis’Qualified MP’ ಎಂದು ಹಾಕಿ ಕೊಂಡಿದ್ದರು. ಇದೀಗ, ಹಿಂದಿನ ಬಯೋವನ್ನು ‘Member of Parliament’ ಎಂದು ಬದಲಾಯಿಸಿದ್ದಾರೆ.
ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ತಪ್ಪಿತಸ್ಥ ಎಂದು ಆದೇಶಿಸಿದ್ದ ಗುಜರಾತ್ನ ಸೂರತ್ ನ್ಯಾಯಾಲಯ, ಮಾರ್ಚ್ 23 ರಂದು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಸೂರತ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸೂರತ್ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಿತ್ತು.
ಸುಪ್ರೀಂ ತೀರ್ಪಿನ ನಂತರ ಲೋಕಸಭೆ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ರಾಹುಲ್ ಗಾಂಧಿಯವರ ಸದಸ್ಯತ್ವದ ಅನರ್ಹತೆ ಹಿಂಪಡೆದಿದ್ದು, ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ ಎಂದು ತಿಳಿಸಿದೆ.