ಮುಂಬೈ: ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಅಧಿಕಾರಿಗಳು ಪುಣೆಯಲ್ಲಿರುವ 2 ಡೈರಿ ಉತ್ಪನ್ನಗಳ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ 2,000 ಕೆಜಿ ಕಲಬೆರಕೆ ಪನೀರ್ ಹಾಗೂ ಕೆನೆರಹಿತ ಹಾಲಿನ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ.
ಕೊಂಡ್ವಾ ಮತ್ತು ವಾನ್ವಾಡಿ ಪ್ರದೇಶದಲ್ಲಿರುವ ಕಾರ್ಖಾನೆಗಳಲ್ಲಿ ತೈಲ ಮತ್ತು ಹಾಲಿನ ಪುಡಿಯನ್ನು ಬಳಸಿ ಕಲಬೆರಕೆ ಪನೀರ್ ಅನ್ನು ತಯಾರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ.
ಇದು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲಾದ 3ನೇ ದಾಳಿಯಾಗಿದೆ. ದಾಳಿಯಲ್ಲಿ ಕಲಬೆರಕೆ ಪನೀರ್ ಮತ್ತು ಇತರ ಡೈರಿ ಉತ್ಪನ್ನ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂದು ನಡೆಸಿದ ದಾಳಿಯಲ್ಲಿ 2 ಫ್ಯಾಕ್ಟರಿಗಳಿಂದ 25 ಲಕ್ಷ ಮೌಲ್ಯದ 2,000 ಕೆಜಿ ಕಲಬೆರೆಕೆ ಪನೀರ್ ವಶಪಡಿಸಿಕೊಳ್ಳಲಾಗಿದೆ ಎಂದು ಎಫ್‌ಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಅವುಗಳ ಮಾದರಿಗಳನ್ನು ಪರೀಕ್ಷೆಗಾಗಿ ಎಫ್‌ಡಿಎ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮುಂದಿನ ಆದೇಶದವರೆಗೆ ವ್ಯಾಪಾರ ವನ್ನು ನಿಲ್ಲಿಸುವಂತೆ ನಾವು ಎರಡೂ ಡೈರಿಗಳಿಗೆ ನೋಟಿಸ್ ನೀಡಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.