Thursday, 12th December 2024

ಭೂಕುಸಿತ: ಅವಶೇಷಗಳಡಿ ಸಿಲುಕಿದ 30 ಮನೆಗಳು

ರಾಯಗಢ: ರಾಯಗಢ ಜಿಲ್ಲೆಯ ಖಲಾಪುರ್ ತಾಲೂಕಿನ ಇರ್ಶಲವಾಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಭಾರಿ ಭೂಕುಸಿತ ಉಂಟಾಗಿದೆ. ಗ್ರಾಮದ 30 ಮನೆಗಳು ಅವಶೇಷಗಳಡಿ ಸಿಲುಕಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಸುಮಾರು 100 ಜನರು ಸಿಕ್ಕಿ ಬಿದ್ದಿದ್ದಾರೆ.

ಸದ್ಯ 25 ಮಂದಿ ರಕ್ಷಣೆ ಮಾಡಲಾಗಿದೆ. ವಿಷಯ ತಿಳಿದು ರಾಷ್ಟ್ರೀಯ ವಿಪತ್ತು ನಿರ್ವ ಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ ಎಫ್) ತಂಡಗಳು, ಪೊಲೀಸರು ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ಭೂಕುಸಿತದಲ್ಲಿ ಗಾಯಗೊಂಡ 20ಕ್ಕೂ ಹೆಚ್ಚು ಮಂದಿಯನ್ನು ನವಿ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮ ಬೆಟ್ಟದ ಅಡಿಯಿರುವ ಕಾರಣ ಈ ದುರಂತ ಸಂಭ ವಿಸಿದೆ. ಕನಿಷ್ಠ 100 ಜನರು ಸಿಕ್ಕಿಬಿದ್ದಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿ ದ್ದಾರೆ.

ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಸಚಿವರಾದ ಉದಯ್ ಸಾಮಂತ್, ಗಿರೀಶ್ ಮಹಾಜನ್ ಮತ್ತು ದಾದಾ ಭೂಸೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಸಚಿವರು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ.

ಸಿಎಂ ಏಕನಾಥ್ ಶಿಂಧೆ ಮಾತನಾಡಿ, ಎರಡು ಬೆಟ್ಟಗಳ ನಡುವೆ ಈ ಗ್ರಾಮವಿದೆ. ಹೀಗಾಗಿ ಮಣ್ಣು ಕುಸಿದು ಮನೆಗಳ ಮೇಲೆ ಬಿದ್ದಿದೆ. ರಕ್ಷಣಾ ತಂಡಗಳು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಿಕ್ಕಿಬಿದ್ದವರ ಜೀವ ಉಳಿಸುವ ಎಲ್ಲ ಪ್ರಯತ್ನಗಳು ಸಾಗಿವೆ. ಭಾರತೀಯ ವಾಯುಪಡೆಯ (IAF) ಸಹಾಯವನ್ನೂ ಕೋರಲಾಗುವುದು. ಎರಡು ಹೆಲಿಕಾಪ್ಟರ್‌ಗಳು ಸಿದ್ಧವಾಗಿವೆ. ಮಳೆ, ಕೆಟ್ಟ ಹವಾಮಾನ ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟು ಮಾಡುತ್ತಿದೆ ಎಂದು ಹೇಳಿದರು.