ಚಂಡೀಗಢ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಮೂರು ದಿನಗಳ ಕಾಲ ಪಂಜಾಬ್‌ನ ವಿವಿಧ ರೈತ ಸಂಘಟನೆಗಳ ಸದಸ್ಯರು ಹಮ್ಮಿಕೊಂಡಿರುವ ‘ರೈಲ್ ರೋಕೋ’ ಚಳವಳಿ ಕೊನೆಯ ದಿನಕ್ಕೆ ಕಾಲಿಟ್ಟಿದೆ.
ಕೊನೆಯ ದಿನ ಅಮೃತಸರ, ಜಲಂಧರ್ ಕಂಟೋನ್ಮೆಂಟ್ ಮತ್ತು ತರಣ್ ಸೇರಿದಂತೆ 12 ಸ್ಥಳಗಳಲ್ಲಿ ರೈಲು ಹಳಿಗಳ ಮೇಲೆ ಕುಳಿತು ಅನ್ನದಾತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಆಂದೋಲನದಿಂದಾಗಿ ರೈಲ್ವೆ ಇಲಾಖೆ ಹಾಗೂ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಪಂಜಾಬ್‌ನ ವಿವಿಧ ಜಿಲ್ಲೆಗಳಲ್ಲಿ ರೈತರು ಹಳಿಗಳ ಮೇಲೆ ಕುಳಿತು ಆಕ್ರೋಶ ವ್ಯಕ್ತಪಡಿಸು ತ್ತಿರುವುದರಿಂದ ಸುರಕ್ಷತೆ ದೃಷ್ಟಿ ಯಿಂದಾಗಿ ರೈಲ್ವೆ ಇಲಾಖೆ ಅನೇಕ ರೈಲುಗಳನ್ನು ರದ್ದುಗೊಳಿಸಿದೆ. ಈಗಾಗಲೇ ಸಿದ್ಧಪಡಿಸಿದ ಮಾರ್ಗಸೂಚಿ ಪ್ರಕಾರ ಹಲವು ಮಾರ್ಗಗಳನ್ನು ಬದಲಾಯಿಸಿದೆ. ಇದರಿಂದಾಗಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹರಿಯಾಣ, ಪಂಜಾಬ್ ಮತ್ತು ದೆಹಲಿ ನಡುವೆ ಓಡುವ ಹಲವು ರೈಲುಗಳ ಮೇಲೆ ಸಹ ಪ್ರತಿಭಟನೆ ಪರಿಣಾಮ ಬೀರಿದೆ.
ರೈಲ್ವೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 44 ರೈಲುಗಳನ್ನು ರದ್ದುಗೊಳಿಸಲಾಗಿದೆ. 20 ರೈಲುಗಳ ಮಾರ್ಗವನ್ನು ಬದಲಾಯಿಸ ಲಾಗಿದ್ದು, 20ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ಮೊಟಕುಗೊಳಿಸಲಾಗಿದೆ.
ಇನ್ನು ಪಂಜಾಬ್‌ನಲ್ಲಿ ಮುಖ್ಯವಾಗಿ ಮೋಗಾ ಜಿಲ್ಲೆ, ಹೋಶಿಯಾರ್‌ಪುರ, ಗುರುದಾಸ್‌ಪುರದ ಬಟಾಲಾ, ಜಲಂಧರ್ ಕಂಟೋ ನ್ಮೆಂಟ್, ಸುನಮ್, ನಭಾ, ಬಸ್ತಿಯಲ್ಲಿ ಟ್ರ್ಯಾಕ್‌ಗಳನ್ನು ನಿರ್ಬಂಧಿಸಲು ರೈತರು ಬೇರೆ ರಾಜ್ಯಗಳಿಂದ ಆಗಮಿಸಿದ್ದಾರೆ. ಫಿರೋಜ್ ಪುರದ ಟ್ಯಾಂಕ್‌ವಾಲಿ ಮತ್ತು ಮಲ್ಲನ್‌ವಾಲಾ, ಬಟಿಂಡಾದ ರಾಂಪುರ ಮತ್ತು ಅಮೃತಸರದ ದೇವಿದಾಸ್‌ಪುರದಲ್ಲಿ ರೈಲು ಹಳಿಗಳ ಮೇಲೆ ಕುಳಿತು ಆಕ್ರೋಶ ಹೊರ ಹಾಕುತ್ತಿದ್ದಾರೆ.