Sunday, 15th December 2024

ಟ್ರಕ್ ಗೆ ಕಾರು ಢಿಕ್ಕಿ: ಒಂದೇ ಕುಟುಂಬದ ನಾಲ್ವರ ಸಾವು

ರಾಜಸ್ಥಾನ: ಟ್ರಕ್ ಗೆ ಕಾರು ಢಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ನಡೆದಿದೆ.

ಮಧ್ಯಪ್ರದೇಶದ ಅಗರ್-ಮಾಲ್ವಾ ಜಿಲ್ಲೆಯ ಗಂಗುಖೇಡಿ ಗ್ರಾಮದ ದೇವಿ ಸಿಂಗ್ (50), ಅವರ ಪತ್ನಿ ಮಾಂಖೋರ್ ಕನ್ವರ್ (45), ಅವರ ಸಹೋದರ ರಾಜಾರಾಂ (40) ಮತ್ತು ಸೋದರಳಿಯ ಜಿತೇಂದ್ರ (20) ಮೃತರು.

ಈ ನಾಲ್ವರು ಕಾರಿನಲ್ಲಿ ಪುಷ್ಕರ್ ಗೆ ತೆರಳುತ್ತಿದ್ದಾಗ ಶನಿವಾರ ಮಧ್ಯರಾತ್ರಿ ಸುಮಾರಿಗೆ ಹಿಂದೋಲಿ ಪಟ್ಟಣದ ಬಳಿ ಇವರ ಕಾರು ಹಿಂದಿನಿಂದ ಹೆವಿ ಡ್ಯೂಟಿ ಟ್ರಕ್‌ಗೆ ಢಿಕ್ಕಿಯಾಗಿದೆ.

ಟ್ರಕ್ ಚಾಲಕ ವಾಹನ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತದೇಹಗಳು ಶವಾಗಾರದಲ್ಲಿದ್ದು ಕುಟುಂಬ ಸದಸ್ಯರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಹಿಂದೋಲಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಕಾರು ಬಹಳ ವೇಗವಾಗಿ ಸಾಗುತ್ತಿದ್ದು, ಮುಂದಿದ್ದ ಟ್ರಕ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ವಾಹನವು ಅದರೊಳಗೆ ನುಗ್ಗಿ ಅಪಘಾತ ಸಂಭವಿಸಿರ ಬಹುದು ಎಂದು ಶಂಕಿಸಲಾಗಿದೆ.