Thursday, 21st November 2024

ರಾಜಸ್ಥಾನ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಬಿಜೆಪಿ ಗುರುವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಎಲ್ ಪಿಜಿ ಸಿಲಿಂಡರ್ ಗೆ ರೂ.450 ಸಬ್ಸಿಡಿ ಮತ್ತು 2.5 ಲಕ್ಷ ಸರ್ಕಾರಿ ಉದ್ಯೋಗ ಸೇರಿದಂತೆ ಹಲವು ಭರವಸೆ ನೀಡಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ, ಪೇಪರ್ ಲೀಕ್ ಮತ್ತು ಕಾಂಗ್ರೆಸ್ ಸರ್ಕಾರದ ಇತರ ಆರೋಪಗಳ ಹಗರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗುವುದು ಎಂದು ಹೇಳಿದರು.
ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುವುದು, ಪ್ರತಿ ಜಿಲ್ಲೆಯಲ್ಲಿ ‘ಮಹಿಳಾ ಠಾಣೆ’ ಮತ್ತು ಪ್ರತಿ ಪೊಲೀಸ್ ಠಾಣೆಯಲ್ಲಿ ‘ಮಹಿಳಾ ಡೆಸ್ಕ್’ ಮತ್ತು ಪ್ರತಿ ನಗರದಲ್ಲಿ ಆಂಟಿ ರೋಮಿಯೋ ಸ್ಕ್ವಾಡ್ ಸ್ಥಾಪಿಸಲಾಗುವುದು ಎಂದು ಹೇಳಿದರು.
ಹೆಣ್ಣು ಮಗುವಿನ ಜನನದ ಸಂದರ್ಭದಲ್ಲಿ 2 ಲಕ್ಷ ರೂಪಾಯಿ ಉಳಿತಾಯ ಬಾಂಡ್ ಮತ್ತು ಭೂಮಿ ಹರಾಜಾದ ರೈತರಿಗೆ ಪರಿಹಾರ ನೀತಿಯನ್ನು ಘೋಷಿಸಿದರು. ರಾಜಸ್ಥಾನದಲ್ಲಿ ನ.25 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.