ಜೈಪುರ: ತಮ್ಮ 57ನೇ ಹುಟ್ಟುಹಬ್ಬದ ದಿನವೇ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಭಜನ್ ಲಾಲ್ ಶರ್ಮಾ ರಾಜ್ಯದ 16ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಸಮಾರಂಭದ ಕೇಂದ್ರ ಬಿಂದುವಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಜೈಪುರದ ರಾಮ್ನಿವಾಸ್ ಭಾಗ್ನ ಅಲ್ಬರ್ಟ್ ಹಾಲ್ ಎದುರು ಆಯೋಜಿಸಿರುವ ಸಮಾರಂಭದಲ್ಲಿ ಭಜನ್ ಲಾಲ್ ಶರ್ಮಾ ಪ್ರಮಾಣವಚನ ಸ್ವೀಕರಿಸಿ ದರು. ದಿಯಾ ಕುಮಾರಿ ಹಾಗೂ ಪ್ರೇಮ್ ಚಂದ್ ಬೈರ್ವಾ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮೂವರಿಗೂ ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಸುಮಾರು 1 ಲಕ್ಷಕ್ಕೂ ಅಧಿಕ ಜನರು ನೂತನ ಸಿಎಂ ಹಾಗೂ ಡಿಸಿಎಂಗಳ ಪದಗ್ರಹಣಕ್ಕೆ ಸಾಕ್ಷಿಯಾಗಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕಿ ವಸುಂಧರ ರಾಜೆ ಸೇರಿದಂತೆ ಹಲವಾರು ಕೇಂದ್ರ ಸಚಿವರು ಹಾಗೂ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಮೋಹನ್ ಯಾದವ್ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
ವಿಶೇಷವಾಗಿ, ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಉಪಸ್ಥಿತಿ ಎಲ್ಲರ ಗಮನ ಸೆಳೆಯಿತು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ, ಭಜನ್ ಲಾಲ್ ಶರ್ಮಾ ಜೈಪುರದ ಗೋವಿಂದ್ ದೇವ್ ದೇವಸ್ಥಾನದಲ್ಲಿ ಪೂಜೆ ಕೊಟ್ಟು, ಪ್ರಾರ್ಥನೆ ಸಲ್ಲಿಸಿ ಆಗಮಿಸಿದ್ದರು.