ಲಖನೌ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಭಯೋತ್ಪಾದಕ ದಾಳಿಯನ್ನು ದುರದೃಷ್ಟಕರ ಎಂದು ಬಣ್ಣಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು, ನಮ್ಮ ಸೇನೆ ಭಯೋತ್ಪಾದಕರಿಗೆ ಸೂಕ್ತ ಉತ್ತರ ನೀಡುತ್ತಿದೆ. ಶೀಘ್ರದಲ್ಲಿಯೇ ರಾಜ್ಯದ ಭಯೋತ್ಪಾದಕ ಚಟುವಟಿಕೆಯನ್ನು ಸಂಪೂರ್ಣ ನಿಲ್ಲಿಸಲಾಗುವುದು ಎಂದು ಹೇಳಿದರು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ದಾಳಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ತಿಳಿಸಿದರು.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಬಗ್ಗೆ ಮಾತನಾಡಿದ ಸಚಿವರು, ʼʼಭದ್ರತಾ ಲೋಪದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಉಗ್ರರ ದಾಳಿಯ ಪ್ರಮಾಣ ಕಡಿಮೆಯಾಗಿದೆ. ನಮ್ಮ ಭದ್ರತಾ ಪಡೆ ಎಲ್ಲ ಪರಿಸ್ಥಿತಿಗಳನ್ನು ಎದುರಿಸಲು ಸನ್ನದ್ಧವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರದಲ್ಲಿಯೇ ಉಗ್ರರ ಚಟುವಟಿಕೆ ಸಂಪೂರ್ಣ ನಿರ್ಮೂಲನೆ ಮಾಡಲಾಗುವುದು ಮತ್ತು ರಾಜ್ಯದ ಪ್ರಗತಿಗೆ ವೇಗ ನೀಡಲಾಗುವುದುʼʼ ಎಂದು ಅವರು ಭರವಸೆ ನೀಡಿದರು.
Speaking at the 65th Foundation Day of IIT, Kanpur. https://t.co/XAXTRwLEYU
— Rajnath Singh (@rajnathsingh) November 2, 2024
ಸೇನೆಯಿಂದ ದಿಟ್ಟ ಉತ್ತರ
“ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಭಯೋತ್ಪಾದಕರ ದಾಳಿ ದುರದೃಷ್ಟಕರ. ನಮ್ಮ ಭದ್ರತಾ ಪಡೆಗಳು ಸಹ ಸೂಕ್ತ ಉತ್ತರವನ್ನು ನೀಡುತ್ತಿವೆ. ಕಾರ್ಯಾಚರಣೆಯಲ್ಲಿ ಅನೇಕ ಭಯೋತ್ಪಾದಕರು ಹತರಾಗಿದ್ದಾರೆʼʼ ಎಂದು ವಿವರಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್
ಶನಿವಾರ (ನ. 2) ಜಮ್ಮು ಕಾಶ್ಮೀರದ 2 ಕಡೆ ಎನ್‌ಕೌಂಟರ್ ನಡೆದಿದ್ದು, ಇಬ್ಬರು ಉಗ್ರರನ್ನು ಸೇನಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಬೆಳಿಗ್ಗೆ ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಬಳಿಕ ಅನಂತ್‌ನಾಗ್ ಜಿಲ್ಲೆಯಲ್ಲಿ ಮತ್ತೊಂದು ಸುತ್ತಿನ ಎನ್‌ಕೌಂಟರ್ ನಡೆದಿದ್ದು, ಇಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ಸತ್ತ ಭಯೋತ್ಪಾದಕರಲ್ಲಿ ಓರ್ವ ವಿದೇಶಿ ಪ್ರಜೆಯಾಗಿದ್ದು, ಇನ್ನೋರ್ವ ಸ್ಥಳೀಯ ಮೂಲದವನು. ಆದಾಗ್ಯೂ ಇವರು ಯಾವ ನಿರ್ದಿಷ್ಟ ಭಯೋತ್ಪಾದಕ ಗುಂಪಿಗೆ ಸೇರಿದವರು ಎನ್ನುವುದು ತಿಳಿದು ಬಂದಿಲ್ಲ. ಸದ್ಯ ಕಾರ್ಯಾಚರಣೆ ಮುಂದುವರಿದಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಅಖ್ನೂರ್ ದಾಳಿಯ ಉಗ್ರರು ಎನ್‌ಕೌಂಟರ್‌ಗೆ ಬಲಿ
ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್‌ನಲ್ಲಿ ಅ. 28ರಂದು ಸೇನಾ ವಾಹನದ ಮೇಲೆ ದಾಳಿ ನಡೆಸಿದ ಮೂವರು ಭಯೋತ್ಪಾದಕರನ್ನು ಅ. 29ರಂದು ಸೇನೆ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿತ್ತು. ಬರೋಬ್ಬರಿ 27 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಬಳಿಕ ಮೂವರು ಉಗ್ರರ ಹತ್ಯೆ ಮಾಡಲಾಗಿತ್ತು.
ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಸೇನಾ ವಾಹನದ ಭಾಗವಾಗಿದ್ದ ಆಂಬ್ಯುಲೆನ್ಸ್‌ಗೆ ಭಯೋತ್ಪಾದಕರು ಅ. 28ರಂದು ಗುಂಡು ಹಾರಿಸಿದ ನಂತರ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿತ್ತು. ಮೂವರು ಉಗ್ರರನ್ನು ಜೋಗ್ವಾನ್ ಗ್ರಾಮದ ಅಸ್ಸಾನ್ ದೇವಸ್ಥಾನದ ಬಳಿ ಹೊಡೆದುರುಳಿಸಲಾಗಿತ್ತು. ಆ ಮೂಲಕ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಬಟಾಲ್ ಪ್ರದೇಶದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಮೂವರು ಭಯೋತ್ಪಾದಕರು ಸೇನಾ ವಾಹನದ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದರು. ತಕ್ಷಣ ಎಚ್ಚೆತ್ತ ಭದ್ರತಾ ಪಡೆಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸ್ಥಳದಲ್ಲಿಯೇ ಒಬ್ಬ ಉಗ್ರನನ್ನು ಹತ್ಯೆ ಮಾಡಿದ್ದರು. ನಂತರ ಉಳಿದ ಇಬ್ಬರು ಉಗ್ರರಿಗಾಗಿ ಶೋಧ ಮುಂದುವರಿಸಿದ್ದರು. ನಂತರ ಕಾರ್ಯಾಚರಣೆಯಲ್ಲಿ ಅಡಗಿ ಕುಳಿತಿದ್ದ ಇನ್ನಿಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ: Anantnag Encounter: ಜಮ್ಮು & ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ