Friday, 22nd November 2024

Rajnath Singh: ಎಲ್ಎಸಿ ಬಳಿಯಿಂದ ಸೇನೆ ವಾಪಸಾತಿ ಪ್ರತಿಕ್ರಿಯೆ ಬಹುತೇಕ ಪೂರ್ಣ; ರಾಜನಾಥ್ ಸಿಂಗ್

Rajnath Singh

ಹೊಸದಿಲ್ಲಿ: ʼʼಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಬಳಿಯಿಂದ ಸೇನೆಯನ್ನು ಹಿಂಪಡೆಯುವ (Disengagement) ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಬಹುತೇಕ ಪೂರ್ಣಗೊಂಡಿದೆ. ಭಾರತವು ಸೇನೆ ವಾಪಸಾತಿ ಪ್ರತಿಕ್ರಿಯೆಯನ್ನೂ ಮೀರಿ ಕಾರ್ಯ ನಿರ್ವಹಿಸಲು ಬಯಸುತ್ತದೆ. ಆದರೆ ಇದಕ್ಕೆ ಒಂದಷ್ಟು ಸಮಯ ತಗಲುತ್ತದೆʼʼ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ತಿಳಿಸಿದರು.

“ಎಲ್ಎಸಿಯ ಉದ್ದಕ್ಕೂ ಕೆಲವು ಪ್ರದೇಶಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಭಾರತ ಮತ್ತು ಚೀನಾ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ಮಾತುಕತೆ ನಡೆಸುತ್ತಿವೆ. ಇದರ ಪರಿಣಾಮವಾಗಿ ಮೊದಲ ಹಂತದಲ್ಲಿ ಸಮಾನ ಮತ್ತು ಪರಸ್ಪರ ಭದ್ರತೆಯ ಆಧಾರದ ಮೇಲೆ ಒಮ್ಮತಕ್ಕೆ ಬರಲಾಯಿತು. ಒಮ್ಮತವು ಸಾಂಪ್ರದಾಯಿಕ ಪ್ರದೇಶಗಳಲ್ಲಿ ಗಸ್ತು ತಿರುಗುವ ಹಕ್ಕನ್ನು ಒಳಗೊಂಡಿದೆ. ಈ ಒಮ್ಮತದ ನಿರ್ಧಾರದ ಹಿನ್ನೆಲೆಯಲ್ಲಿ ಸೇನೆ ವಾಪಸಾತಿ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ. ಸೇನಾ ವಾಪಸಾತಿ ಪ್ರಕ್ರಿಯೆಗಿಂತ ಹೆಚ್ಚಿನದ್ದನ್ನು ಸಾಧಿಸಲು ನಾವು ಯೋಜನೆ ರೂಪಿಸಿದ್ದೇವೆ, ಆದರೆ ಅದಕ್ಕಾಗಿ ಸ್ವಲ್ಪ ಸಮಯ ಕಾಯಬೇಕಾಗುತ್ತದೆ” ಎಂದು ಅವರು ಹೇಳಿದರು.

ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ನಿರ್ಮಿಸಲಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿ ಅವರು ಮಾತನಾಡಿದರು. ಜತೆಗೆ ಮೇಜರ್ ರಾಲೆಂಗ್ನಾವೊ ‘ಬಾಬ್’ ಖತಿಂಗ್ ಅವರ ‘ಶೌರ್ಯದ ವಸ್ತುಸಂಗ್ರಹಾಲಯ’ವನ್ನು ಸಹ ಉದ್ಘಾಟಿಸಿದರು. ಪ್ರತಿಕೂಲ ಹವಾಮಾನದಿಂದಾಗಿ ತವಾಂಗ್‌ಗೆ ಪ್ರಯಾಣಿಸಲು ಸಾಧ್ಯವಾಗದ ಕಾರಣ ರಾಜನಾಥ್ ಸಿಂಗ್ ಅವರು ಅಸ್ಸಾಂನ ತೇಜ್ಪುರದ ಸೇನಾ ಪ್ರಧಾನ ಕಚೇರಿಯಿಂದಲೇ ಚಾಲನೆ ನೀಡಿದರು.

ʼಉಕ್ಕಿನ ಮನುಷ್ಯ’ ಖ್ಯಾತಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ವಿವಿಧ ರಾಜಮನೆತನಗಳ ಆಡಳಿತದಲ್ಲಿದ್ದ ಒಟ್ಟು 562 ರಾಜ್ಯಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜನಾಥ್‌ ಸಿಂಗ್‌ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಯನ್ನು ಸ್ಮರಿಸಿದರು. ʼʼದೇಶ್‌ ಕಾ ವಲ್ಲಭ್‌ʼ ಪ್ರತಿಮೆ ಅನೇಕರಿಗೆ ಸ್ಫೂರ್ತಿಯಾಗಿದೆ. ಇದು ಏಕತೆಯ ಶಕ್ತಿ ಮತ್ತು ಭಾರತದಂತಹ ವೈವಿಧ್ಯಮಯ ರಾಷ್ಟ್ರವನ್ನು ನಿರ್ಮಿಸಲು ಅಗತ್ಯವಿರುವ ಅಚಲ ಮನೋಭಾವವನ್ನು ನೀಡುತ್ತದೆ” ಎಂದು ಅವರು ಹೇಳಿದರು.

ಈಶಾನ್ಯ ಭಾರತ ಮತ್ತು ರಾಷ್ಟ್ರೀಯ ಭದ್ರತೆಗೆ ನೀಡಿದ ಕೊಡುಗೆಗಾಗಿ ಮೇಜರ್ ಬಾಬ್ ಖಥಿಂಗ್ ಅವರಿಗೆ ರಾಜನಾಥ್‌ ಸಿಂಗ್‌ ಗೌರವ ಸಲ್ಲಿಸಿದರು. ಮೇಜರ್ ಖತಿಂಗ್ ಅವರು ತವಾಂಗ್ ಅನ್ನು ಶಾಂತಿಯುತವಾಗಿ ಏಕೀಕರಿಸಲು ಕಾರಣರಾಗಿದ್ದು, ಸಶಸ್ತ್ರ ಸೀಮಾ ಬಲ್, ನಾಗಾಲ್ಯಾಂಡ್ ಸಶಸ್ತ್ರ ಪೊಲೀಸ್ ಮತ್ತು ನಾಗಾ ರೆಜಿಮೆಂಟ್ ಸೇರಿದಂತೆ ಅಗತ್ಯ ಮಿಲಿಟರಿ ಮತ್ತು ಭದ್ರತಾ ಚೌಕಟ್ಟುಗಳನ್ನು ಸ್ಥಾಪಿಸಿದರು. ‘ʼಅವರೂ ಮುಂದಿನ ಪೀಳಿಗೆಗೆ ಸ್ಫೂರ್ತಿ” ಎಂದು ಅವರು ತಿಳಿಸಿದರು.

ಸಿಹಿ ಹಂಚಿಕೊಂಡ ಭಾರತ-ಚೀನಾ ಸೈನಿಕರು

ಲಡಾಖ್‌ನ 2 ಸ್ಥಳಗಳು ಸೇರಿದಂತೆ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ 5 ಸ್ಥಳಗಳಲ್ಲಿ ಭಾರತ ಮತ್ತು ಚೀನಾದ ಸೈನಿಕರು ದೀಪಾವಳಿಯ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡರು. ಕಳೆದ ವಾರದ ಗಸ್ತು ಒಪ್ಪಂದಕ್ಕೆ ಅನುಗುಣವಾಗಿ ಎರಡೂ ಕಡೆಯವರು ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಿಂದ ಮಿಲಿಟರಿಯನ್ನು ಹಿಂಪಡೆಯುತ್ತಿವೆ. ಲಡಾಖ್‌ನ ಚುಶುಲ್ ಮಾಲ್ಡೋ ಮತ್ತು ದೌಲತ್ ಬೇಗ್ ಓಲ್ಡಿ, ಅರುಣಾಚಲ ಪ್ರದೇಶದ ಬಂಚಾ (ಕಿಬುಟು ಬಳಿ) ಮತ್ತು ಬುಮ್ಲಾ ಹಾಗೂ ಸಿಕ್ಕಿಂನ ನಾಥುಲಾದಲ್ಲಿ ಸೈನಿಕರು ಪರಸ್ಪರ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡರು.

ಈ ಸುದ್ದಿಯನ್ನೂ ಓದಿ: Rajnath Singh: ಅ. 31ರಂದು ತವಾಂಗ್‌ನಲ್ಲಿ ಸೈನಿಕರೊಂದಿಗೆ ಸಚಿವ ರಾಜನಾಥ್ ಸಿಂಗ್ ದೀಪಾವಳಿ ಆಚರಣೆ