Wednesday, 11th December 2024

ನಾಮಪತ್ರ ಹಿಂಪಡೆದ ರಾಜಪಾಲ್‌ ಸಿಂಗ್‌ ಶೇಖಾವತ್‌

ಜೈಪುರ: ರಾಜಸ್ಥಾನದ ಮಾಜಿ ಸಚಿವ ಹಾಗೂ ಬಿಜೆಪಿ ಬಂಡಾಯ ನಾಯಕ ರಾಜಪಾಲ್‌ ಸಿಂಗ್‌ ಶೇಖಾವತ್‌ ಸ್ವತಂತ್ರ ಅಭ್ಯರ್ಥಿಯಾಗಿ ಝೋತ್ವಾರಾ ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರವನ್ನು ಗುರುವಾರ ಹಿಂಪಡೆದಿದ್ದಾರೆ.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದು ಅಗತ್ಯವಾಗಿದ್ದು, ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವುದು ಮುಖ್ಯವಾಗಿದೆ. ಆದ್ದರಿಂದ ನಾನು ನಾಮಪತ್ರವನ್ನು ಹಿಂಪಡೆದಿದ್ದೇನೆ. ಅಮಿತ್‌ ಶಾ ಅವರೊಂದಿಗೆ ಮಾತನಾಡಿದ ಬಳಿಕ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಶೇಖಾವತ್‌ ಹೇಳಿದ್ದಾರೆ.

ಜೈಪುರ ಗ್ರಾಮಾಂತರ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರನ್ನು ಝೋತ್ವಾರಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿತ್ತು. ಇದು ಶೇಖಾವತ್ ಮತ್ತು ಅವರ ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ರಾಜಸ್ಥಾನ ಚುನಾವಣೆಯು ನವೆಂಬರ್‌ 25ಕ್ಕೆ ಮತದಾನ ನಡೆಯಲಿದ್ದು, ಇಂದು ನಾಮಪತ್ರ ವಾಪಾಸ್ ಪಡೆಯಲು ಕೊನೆ ದಿನವಾಗಿದೆ.

ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಅಭಿಷೇಕ್ ಚೌಧರಿ ಅವರನ್ನು ಝೋತ್ವಾರಾ ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕಿಳಿಸಿದೆ.