Thursday, 12th December 2024

Ramdas Soren: ಜಾರ್ಖಂಡ್‌ ಸಚಿವರಾಗಿ ರಾಮ್‌ದಾಸ್‌ ಸೊರೆನ್‌ ಪ್ರಮಾಣ ವಚನ ಸ್ವೀಕಾರ

Ramdas Soren

ರಾಂಚಿ: ಜಾರ್ಖಂಡ್‌ ರಾಜಕೀಯದಲ್ಲಿ (Jharkhand Politics) ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಜಾರ್ಖಂಡ್‌ ಮುಕ್ತಿ ಮೋರ್ಚಾ (Jharkhand Mukti Morcha-JMM)ದ ಹಿರಿಯ ನಾಯಕ ರಾಮ್‌ದಾಸ್‌ ಸೊರೆನ್‌ (Ramdas Soren) ಶುಕ್ರವಾರ (ಆಗಸ್ಟ್‌ 30) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಿರಿಯ ನಾಯಕ ಚಂಪೈ ಸೊರೆನ್ (Champai Soren) ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ರಾಮ್‌ದಾಸ್‌ ಸೊರೆನ್‌  ಆಯ್ಕೆಯಾಗಿದ್ದಾರೆ. ಘಟ್‌ಶಿಲ ಶಾಸಕ ರಾಮ್‌ದಾಸ್‌ ಸೊರೆನ್‌ ಅವರಿಗೆ ರಾಜ್ಯಪಾಲ ಸಂತೋಷ್‌ ಕುಮಾರ್‌ ಗಂಗಾವಾರ್‌ ಪ್ರಮಾಣ ವಚನ ಬೋಧಿಸಿದರು.

ರಾಜಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌, ಜೆಎಂಎನ್‌ನ ಹಿರಿಯ ನಾಯಕರು, ಅಧಿಕಾರಿಗಳು ಉಪಸ್ಥಿತರಿದ್ದರು. ಬುಧವಾರ (ಆಗಸ್ಟ್‌ 28) ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್‌ ಅವರು ಸಚಿವ ಸಂಪುಟ ಸ್ಥಾನಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಭೇಟಿಯಾದ ಬೆನ್ನಲ್ಲೇ ಅವರು ಜೆಎಂಎಂಗೆ ರಾಜೀನಾಮೆ ನೀಡಿದ್ದರು. ಇಂದು ಸಂಜೆ ಅವರು ಬಿಜೆಪಿ ಸೇರಲಿದ್ದಾರೆ.

https://x.com/ANI/status/1829386847111274870

ಪಕ್ಷದ ಈಗಿನ ಕಾರ್ಯವೈಖರಿ ಮತ್ತು ನೀತಿಗಳಿಂದ ನೊಂದಿರುವ ಕಾರಣ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.  ಪಕ್ಷದ ವರಿಷ್ಠ ಶಿಬು ಸೊರೆನ್‌ಗೆ ಬರೆದ ರಾಜೀನಾಮೆ ಪತ್ರದಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ಅವರು, ಜೆಎಂಎಂ ಪಕ್ಷದ ಸ್ಥಿತಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಶಿಬು ಸೊರೆನ್ ಅವರ ಮಾರ್ಗದರ್ಶನದಲ್ಲಿ ತಾನು ಮತ್ತು ಇತರ ಪಕ್ಷದ ಕಾರ್ಯಕರ್ತರು ಹೋರಾಡಿದ ಆದರ್ಶಗಳಿಂದ ಜೆಎಂಎಂ ದೂರ ಸರಿದಿದೆ ಎಂದು ಹೇಳಿದ್ದಾರೆ.

ಅಲ್ಪ ಅವಧಿಗೆ ಮುಖ್ಯಮಂತ್ರಿ ಪಟ್ಟ 

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ‌ ಜಾರಿ ನಿರ್ದೇಶನಾಲಯ (Enforcement Directorate) ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ (Hemant Soren) ಅವರನ್ನು ವಶಕ್ಕೆ ಪಡೆದಾಗ ಈ ವರ್ಷದ ಫೆಬ್ರವರಿಯಲ್ಲಿ ಚಂಪೈ ಸೊರೆನ್‌ ಜಾರ್ಖಂಡನ್‌ 12ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಅವರು  ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದು  5 ತಿಂಗಳು ಮಾತ್ರ. ಜಾಮೀನು ಪಡೆದ ಹೇಮಂತ್‌ ಸೊರೆನ್‌ ಜುಲೈಯಲ್ಲಿ ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದಾರೆ.