ಅಯೋಧ್ಯೆ: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೆ ಮೂರು ದಿನಗಳು ಬಾಕಿ ಇರುವಾಗಲೇ ರಾಮಲಲ್ಲಾನ ಮೂರ್ತಿಯ ಮೊದಲ ಚಿತ್ರ ಶುಕ್ರವಾರ ಬಹಿರಂಗಗೊಂಡಿದೆ.
ಕನ್ನಡಿಗ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಈ ಕೃಷ್ಣ ಶಿಲೆಯ ಮೂರ್ತಿಯ ಕಣ್ಣುಗಳನ್ನು ಹಳದಿ ಬಟ್ಟೆಯಿಂದ ಮುಚ್ಚಲಾಗಿದೆ. ಗುಲಾಬಿಯ ಸುಂದರ ಹಾರವನ್ನು ಮೂರ್ತಿಗೆ ಹಾಕಲಾಗಿದೆ. ಈ ಚಿತ್ರವನ್ನು ವಿಶ್ವ ಹಿಂದೂ ಪರಿಷತ್ ಶುಕ್ರವಾರ ಹಂಚಿಕೊಂಡಿದೆ.
’51 ಇಂಚು ಎತ್ತರದ ರಾಮಲಲ್ಲಾನ ಮೂರ್ತಿಯನ್ನು ಗುರುವಾರ ಮಧ್ಯಾಹ್ನ ಗರ್ಭಗುಡಿಯೊಳಗೆ ತರಲಾಯಿತು. ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆಗಳನ್ನು ನಡೆಸಲಾಯಿತು. ವೇದಘೋಷಗಳ ಪಠಣ ಹಾಗೂ ಪೂಜಾ ಕೈಂಕರ್ಯಗಳು ಭರದಿಂದ ಸಾಗಿವೆ’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಅವರು ಪ್ರಧಾನ ಸಂಕಲ್ಪವನ್ನು ಮಾಡಲಿದ್ದಾರೆ’ ಎಂದು ಟ್ರಸ್ಟ್‌ನ ಸದಸ್ಯ ದೀಕ್ಷಿತ್ ತಿಳಿಸಿದೆ.
‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜ.22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳವಾರದಿಂದ ಸಾರ್ವ ಜನಿಕರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದಿದ್ದಾರೆ.
ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಅವರು ಮಾಹಿತಿ ನೀಡಿ, ‘ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾದಿದೆ. ಈಗಾಗಲೇ ಮೂರ್ತಿಯನ್ನು ಗರ್ಭಗುಡಿಯೊಳಗೆ ತರಲಾಗಿದೆ. ಕಾರ್ಯಕ್ರಮ ಸ್ಥಳದಲ್ಲಿ ಮೂಲಸೌಕರ್ಯ, ವೈದ್ಯಕೀಯ ವ್ಯವಸ್ಥೆ, ಔಷಧಗಳ ದಾಸ್ತಾನು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.