ನವದೆಹಲಿ: ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾಮಮಂದಿರ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು.
ಜೊತೆಗೆ ಜಗತ್ತಿನಾದ್ಯಂತ ಶ್ರೀರಾಮನ ಕುರಿತು ಬಿಡುಗಡೆ ಮಾಡಿರುವ ಅಂಚೆ ಚೀಟಿಗಳ ಪುಸ್ತಕವನ್ನೂ ಬಿಡುಗಡೆ ಮಾಡಿದರು.
‘ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಸಂಬಂಧಿಸಿದ ಇನ್ನೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ನನಗೆ ದೊರೆತಿದೆ. ಇಂದು ರಾಮಮಂದಿರಕ್ಕೆ ಸಂಬಂಧಿಸಿದಂತೆ ಆರು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಯಿತು. ಅಲ್ಲದೆ, ವಿಶ್ವದಾದ್ಯಂತ ಶ್ರೀರಾಮನ ಕುರಿತು ಬಿಡುಗಡೆ ಮಾಡಲಾದ ಅಂಚೆ ಚೀಟಿಗಳ ಪುಸ್ತಕವನ್ನು ಸಹ ಬಿಡುಗಡೆ ಮಾಡಲಾಗಿದೆ’ ಎಂದು ವಿಡಿಯೊ ಸಂದೇಶದಲ್ಲಿ ಮೋದಿ ತಿಳಿಸಿದ್ದಾರೆ.
ಬಿಡುಗಡೆಗೊಂಡಿರುವ ಆರು ಅಂಚೆ ಚೀಟಿಗಳು ರಾಮಾಯಣದ ಪ್ರಮುಖ ವ್ಯಕ್ತಿಗಳು ಮತ್ತು ಅಂಶಗಳನ್ನು ಪ್ರತಿನಿಧಿಸುತ್ತವೆ. ಇವುಗಳಲ್ಲಿ ರಾಮ ಮಂದಿರ, ಗಣೇಶ, ಹನುಮಂತ, ಜಟಾಯು, ಕೇವತ್ರಾಜ್ ಮತ್ತು ಶಬರಿ ಸೇರಿವೆ.