ಹೊಸದಿಲ್ಲಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ಪ್ರಜೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ (MEA) ಶನಿವಾರ (ನ. 2) ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಅವರು, ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಸಲಹೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
“ಇಸ್ರೇಲ್‌ನಲ್ಲಿ ಭಾರತೀಯ ಮೂಲದ ಸುಮಾರು 20,000-30,000 ಜನರು ವಾಸಿಸುತ್ತಿದ್ದಾರೆ. ಅಲ್ಲಿನ ನಮ್ಮ ರಾಯಭಾರ ಕಚೇರಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಅಗತ್ಯ ಪ್ರಯಾಣ ಸಲಹೆಗಳು ಮತ್ತು ಇತರ ಸಲಹೆಗಳನ್ನು ನೀಡಿದ್ದೇವೆ” ಎಂದು ಜೈಸ್ವಾಲ್ ಸುದ್ದಿಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
#WATCH | MEA Spokesperson Randhir Jaiswal says, "Regarding the sanction of 19 Indian companies – we have seen these reports of US sanctions. India has a robust legal and regulatory framework on strategic trade and non-proliferation controls. We are also a member of three key… pic.twitter.com/g1YVpytgBp
— ANI (@ANI) November 2, 2024
ಇಸ್ರೇಲ್-ಪ್ಯಾಸ್ತೀನ್ ಯುದ್ಧದ ಕುರಿತಂತೆ ಭಾರತ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಜತೆಗೆ ಮಾತುಕತೆ ಮತ್ತು ರಾಜತಾಂತ್ರಿಕ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಈ ಹಿಂದೆಯೇ ಕರೆ ನೀಡಿದೆ. ಅದೇ ನಿಲುವನನು ಈಗಲೂ ಹೊಂದಿದ್ದೇವೆ ಎಂದು ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
“ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತು ಈ ಪ್ರದೇಶ ಮತ್ತು ಅದರಾಚೆಗಿನ ಕಡೆಗಳಲ್ಲಿನ ಶಾಂತಿ ಮತ್ತು ಸ್ಥಿರತೆಗೆ ಇದು ಬೀರುವ ಪರಿಣಾಮಗಳ ಬಗ್ಗೆ ಕಳವಳ ಹೊಂದಿದ್ದೇವೆ. ಸಂಯಮದಿಂದ ವರ್ತಿಸಲು, ಮಾತುಕತೆ ಮತ್ತು ರಾಜತಾಂತ್ರಿಕ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲು ನಾವು ನೀಡಿರುವ ಕರೆಯನ್ನು ಪುನರುಚ್ಚರಿಸುತ್ತೇವೆ” ಎಂದು ಭಾರತ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. “ಮುಗ್ಧ ಒತ್ತೆಯಾಳುಗಳು ಮತ್ತು ನಾಗರಿಕರು ತೊಂದರೆ ಅನುಭವಿಸುತ್ತಲೇ ಇದ್ದಾರೆʼʼ ಎಂದು ಕಳವಳ ವ್ಯಕ್ತಪಡಿಸಿದೆ.
ಇಸ್ರೇಲ್ ದಾಳಿಗೆ 52 ಮಂದಿ ಬಲಿ
ಈಶಾನ್ಯ ಲೆಬನಾನ್‌ನಲ್ಲಿ ಶುಕ್ರವಾರ (ನ. 1) ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 52 ಜನರು ಸಾವನ್ನಪ್ಪಿದ್ದಾರೆ ಮತ್ತು 72 ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಸ್ರೇಲ್ ಯುದ್ಧ ವಿಮಾನಗಳು ಬೈರುತ್‌ನ ದಕ್ಷಿಣ ಉಪನಗರ ದಹಿಯೆಹ್ ಮೇಲೆ ನಡೆಸಿದ ಈ ದಾಳಿಯಲ್ಲಿ ಹಲವು ಕಟ್ಟಡಗಳನ್ನು ನಾಶವಾಗಿವ. ಆದಾಗ್ಯೂ, ದಾಳಿಗೆ ಮೊದಲೇ ಇಲ್ಲಿನ ನಿವಾಸಿಗಳು ಸ್ತಳಾಂತರಗೊಂಡಿದ್ದರಿಂದ ಹೆಚ್ಚಿನ ಸಾವು-ನೋವುಗಳು ವರದಿಯಾಗಿಲ್ಲ. ಅಮೆರಿಕ ಮತ್ತು ಇತರ ದೇಶಗಳು ಕದನ ವಿರಾಮಕ್ಕಾಗಿ ಒತ್ತಡ ಹೇರುತ್ತಿದ್ದರೂ ಹೆಜ್ಬುಲ್ಲಾ ವಿರುದ್ಧದ ಇಸ್ರೇಲ್‌ನ ದಾಳಿ ತೀವ್ರಗೊಂಡಿದೆ. ಇದು ಲೆಬನಾನ್ ಗಡಿ ಪ್ರದೇಶಗಳನ್ನು ಮೀರಿ ವಿಸ್ತರಿಸಿದೆ. ಉತ್ತರ ಗಾಜಾದಲ್ಲಿ ಹಮಾಸ್‌ನೊಂದಿಗೆ ಇಸ್ರೇಲ್ ದೀರ್ಘ ಕಾಲದ ಹೋರಾಟ ನಡೆಸುತ್ತಿರುವ ಮಧ್ಯೆ ಈ ಬೆಳವಣಿಗೆ ಕಂಡು ಬಂದಿದೆ.
ಶುಕ್ರವಾರದ ದಾಳಿಯ ಹೊರತುಪಡಿಸಿ ಸಂಘರ್ಷದಿಂದ ಲೆಬನಾನ್‌ನ ಕನಿಷ್ಠ 2,900 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಕಾಲು ಭಾಗದಷ್ಟು ಮಹಿಳೆಯರು ಮತ್ತು ಮಕ್ಕಳು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ಗಾಜಾದಲ್ಲಿ ಇಸ್ರೇಲ್ ದಾಳಿಯಿಂದ 43,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ಪ್ಯಾಲಸ್ತೀನ್ ಹೇಳಿದೆ. 2023ರ ಅಕ್ಟೋಬರ್ 7ರಂದು ಪ್ಯಾಲೆಸ್ತೀನ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ನಡೆಸಿದ ದಾಳಿಯ ಬಳಿಕ ಈ ಸಂಘರ್ಷ ಆರಂಭಗೊಂಡಿತ್ತು. ಹಮಾಸ್ ಉಗ್ರರು ಇಸ್ರೇಲ್‌ನ ಸುಮಾರು 1,200 ಜನರನ್ನು ಕೊಂದು, 250 ಮಂದಿಯನ್ನು ಅಪಹರಿಸಿದ್ದರು.
ಈ ಸುದ್ದಿಯನ್ನೂ ಓದಿ: Isrel Hezbollah War: ಇಸ್ರೇಲ್ ವಿರುದ್ಧ ಯುದ್ಧ ನಿರಂತರ; ಹೆಜ್ಬುಲ್ಲಾ ನೂತನ ನಾಯಕ