ಹೈದರಾಬಾದ್: ತೆಲಂಗಾಣದ ಆಸಿಫಾಬಾದ್ ಜಿಲ್ಲೆಯಲ್ಲಿ ಬುಡಕಟ್ಟು ಮಹಿಳೆಯ ಮೇಲಿನ ಅತ್ಯಾಚಾರ ಪ್ರಯತ್ನ (Rape Attempt) ನಡೆಸಿದ್ದರಿಂದ ಉದ್ವಿಗ್ನಗೊಂಡ ಸಮುದಾಯದ ಜನರು ಪ್ರತಿಭಟನೆ ನಡೆಸಿ ಆರೋಪಿ ಶೇಖ್ ಮುಖ್ದಮ್ ಹಾಗೂ ಆತನ ಸಂಬಂಧಿಕರಿಗೆ ಸೇರಿದ್ದ ಮನೆಗಳು ಹಾಗೂ ಅಂಗಡಿಗಳಿಗೆ ಬೆಂಕಿ ಇಟ್ಟ ಘಟನೆ ನಡೆದಿದೆ. ಜೈನೂರ್ ಪಟ್ಟಣದಲ್ಲಿ ಘಟನೆ ನಡೆದಿದು. ಆಕಾಶದಲ್ಲಿ ಹೊಗೆ ತುಂಬಿರುವ ಚಿತ್ರಗಳು ಬಿಡುಗಡೆಯಾಗಿವೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಈ ಪ್ರದೇಶದಲ್ಲಿ ಭಾರಿ ಪೊಲೀಸ್ ನಿಯೋಜನೆ ಮಾಡಲಾಗಿದೆ.
45 ವರ್ಷದ ಬುಡಕಟ್ಟು ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಆಟೋ ಚಾಲಕ ಶೇಖ್ ಮುಖ್ದಮ್ನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆಗಸ್ಟ್ 31 ರಂದು ಈ ಘಟನೆ ನಡೆದಿದ್ದು, ಮಹಿಳೆ ರಸ್ತೆಯ ಬದಿಯಲ್ಲಿ ಬಿದ್ದಿದ್ದರು. ಆರಂಭದಲ್ಲಿ ಈ ಘಟನೆಯನ್ನು ಹಿಟ್ ಆಂಡ್ ರನ್ ಪ್ರಕರಣ ಎಂದು ವರದಿ ಮಾಡಲಾಗಿತ್ತು. ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ನ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಸೆಪ್ಟೆಂಬರ್ 1ರಂದು, ಮಹಿಳೆಯ ಕಿರಿಯ ಸಹೋದರ ದೂರು ದಾಖಲಿಸಿದ್ದರು. ಹೀಗಾಗಿ ಮತ್ತೊಮ್ಮೆ ಅಧಿಕಾರಿಗಳು ತನಿಖೆ ನಡೆಸಿದ್ದರು. ಗೊಂಡ್ ಸಮುದಾಯಕ್ಕೆ ಸೇರಿದ ಮಹಿಳೆ ಸೆಪ್ಟೆಂಬರ್ 2 ರಂದು ಪ್ರಜ್ಞೆ ಮರಳಿದ್ದರು. ಈ ವೇಳೆ ಅವರು ನೈಜ ಘಟನೆ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ತಾನು ಕೆಲಸಕ್ಕಾಗಿ ಹೋಗಿದ್ದ ಜೈನೂರಿನಿಂದ ತನ್ನ ತಾಯಿಯ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದೂ. ಜೈನೂರಿನಿಂದ ಶೇಖ್ ಮುಗ್ಧಮ್ ಎಂಬಾತ ಓಡಿಸುತ್ತಿದ್ದ ಆಟೋ ಹತ್ತಿದ್ದರು. ದಾರಿಯಲ್ಲಿ ಆತ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದ. ಆಕೆ ಪ್ರತಿರೋಧಿಸಿದಾಗ ಕೋಲಿನಿಂದ ಹಲ್ಲೆ ಮಾಡಿದ್ದ. ಏಟು ತಿಂದು ಆಕೆ ಸತ್ತಿದ್ದಾಳೆಂದು ನಂಬಿದ್ದ ಆರೋಪಿ ರಸ್ತೆಯಲ್ಲಿ ಎಸೆದು ಓಡಿ ಹೋಗಿದ್ದ.
ಈ ಸುದ್ದಿಯನ್ನೂ ಓದಿ: Haryana Election : ಹರಿಯಾಣ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ
ಮಹಿಳೆಯ ಹೇಳಿಕೆಯ ನಂತರ, ಪೊಲೀಸರು ಆರೋಪಿಗಳ ವಿರುದ್ಧ ಎಸ್ಸಿ / ಎಸ್ಟಿ ಕಾಯ್ದೆಯಡಿ ಅತ್ಯಾಚಾರ ಮತ್ತು ಕೊಲೆ ಯತ್ನ ಸೇರಿದಂತೆ ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಡಿಎಸ್ಪಿ ಸದಯ್ಯ ಪಂಥಾಟಿ ಆರೋಪಿಯ ಬಂಧನವನ್ನು ದೃಢಪಡಿಸಿದ್ದಾರೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಕೋಮು ಉದ್ವಿಗ್ನತೆಯ ಬಗ್ಗೆ ತೆಲಂಗಾಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂಸಾಚಾರದಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. “ನಾನು ಶಾಂತಿಗಾಗಿ ಮನವಿ ಮಾಡುತ್ತಿದ್ದೇನೆ. ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶ ನೀಡಬಾರದು ಎಂದು ನಾನು ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಹಿಂಸಾಚಾರದಲ್ಲಿ ತೊಡಗಿರುವವರನ್ನು ತಕ್ಷಣ ಹಿಡಿಯಬೇಕು. ಜನರಿಗೆ ಏನು ಬೇಕಾದರೂ ಮಾಡಲು ಅವಕಾಶ ನೀಡಬಾರದು” ಎಂದು ಓವೈಸಿ ಹೇಳಿದ್ದಾರೆ.