ಬದಾಯುಂ: ಉತ್ತರಪ್ರದೇಶದ ಬದಾಯುಂನಲ್ಲಿ 50 ವರ್ಷದ ಮಹಿಳೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರೊಬ್ಬರ ಬೇಜವಾಬ್ದಾರಿ ಹೇಳಿಕೆ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಎಡೆಮಾಡಿದೆ.
ಸಂಜೆ ಹೊತ್ತಲ್ಲಿ ಆ ಮಹಿಳೆ ಮನೆಯಿಂದ ಹೊರಗೆ ಹೋಗದೇ ಇದ್ದಿದ್ದರೆ ಈ ಘಟನೆಯನ್ನು ತಪ್ಪಿಸಬಹುದಿತ್ತು. ಸಂಜೆ ಹೊತ್ತಲ್ಲಿ ಯಾವುದೇ ಕಾರಣಕ್ಕೂ ಮನೆ ಬಿಟ್ಟು ಹೊರಗೆ ಹೋಗಬೇಡಿ,” ಎಂದು ರಾಷ್ಟ್ರೀಯ ಮಹಿಳಾ ಆಯೋ ಗದ ಸದಸ್ಯೆ ಚಂದ್ರಮುಖಿ ದೇವಿ ಹೇಳಿಕೆ ನೀಡಿದ್ದಾರೆ.
ಕಳೆದ ಭಾನುವಾರ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆ ಮೇಲೆರಗಿದ್ದ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ, ಮಹಿಳೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದರು.
ಸಂಜೆ ಸಮಯದಲ್ಲಿ ಮಹಿಳೆ ಒಬ್ಬಳೆ ದೇವಸ್ಥಾನಕ್ಕೆ ತೆರಳದೆ ಇದ್ದಿದ್ದರೆ ಅಥವಾ ಕುಟುಂಬದ ಒಂದು ಮಗುವನ್ನು ಜೊತೆಯಲ್ಲಿ ಕರೆದೊಯ್ದಿದ್ದರೂ ಈ ಘಟನೆಯನ್ನು ತಪ್ಪಿಸಬಹುದಿತ್ತು. ಫೋನ್ ಮಾಡಿ ಆಕೆಯನ್ನು ಕರೆಸಿಕೊಳ್ಳಲಾಗಿದೆ. ಇದು ಪೂರ್ವ ನಿಯೋಜಿತ ಕೃತ್ಯ,” ಎಂದು ಮಹಿಳೆಯ ಕುಟುಂಬವನ್ನು ಭೇಟಿಯಾದ ನಂತರ ಹೇಳಿಕೆ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಮಹಿಳಾ ಆಯೋಗದ ಸದಸ್ಯೆ ಹೇಳಿಕೆ ಕುರಿತಂತೆ ಆಕ್ರೋಶ ವ್ಯಕ್ತವಾಗಿದೆ.