Wednesday, 23rd October 2024

Ratan Tata Death: ಟಾಟಾ ಜೊತೆಗಿನ ನೆನಪು ಹಂಚಿಕೊಂಡ ಬಿಗ್ ಬಿ

Ratan Tata Death

ಹಿರಿಯ ಕೈಗಾರಿಕಾ ಉದ್ಯಮಿ ರತನ್ ಟಾಟಾ (Ratan Tata Death) ಅವರ ನಿಧನಕ್ಕೆ ಬಾಲಿವುಡ್ ನ ಹಿರಿಯ ನಟ (Bollywood actor) ಅಮಿತಾಭ್ ಬಚ್ಚನ್ (Amitabh Bachchan) ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದು, ಅವರೊಂದಿಗಿನ ಅದ್ಭುತ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

ರಕ್ತದೊತ್ತಡದಲ್ಲಿ ಹಠಾತ್ ಕುಸಿತದಿಂದಾಗಿ 86ನೇ ವಯಸ್ಸಿನಲ್ಲಿ ರತನ್ ಟಾಟಾ ಅವರು ಅಕ್ಟೋಬರ್ 9ರಂದು ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇದಕ್ಕೆ ಅನೇಕ ಗಣ್ಯರು, ಸಿನಿಮಾ ನಟನಟಿಯರು ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ.

ರತನ್ ಟಾಟಾ ಅವರ ನಾಯಕತ್ವ, ಮೌಲ್ಯಗಳು ಮತ್ತು ದೇಶಕ್ಕಾಗಿ ಅವರು ನೀಡಿರುವ ಕೊಡುಗೆಗಳನ್ನು ಅನೇಕರು ಸ್ಮರಿಸಿದ್ದಾರೆ. ನಟ ಅಮಿತಾಬ್ ಬಚ್ಚನ್ ಕೂಡ ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿ ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡರು.

ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಅಮಿತಾಭ್ ಬಚ್ಚನ್ ಹೀಗೆ ಬರೆದಿದ್ದಾರೆ. ರತನ್ ಟಾಟಾ ಅವರ ನಿಧನದ ಬಗ್ಗೆ ತಿಳಿಯಿತು. ಕೊನೆಯ ಕ್ಷಣದವರೆಗೂ ಕೆಲಸ ಮಾಡುತ್ತಿದ್ದರು. ಒಂದು ಯುಗವು ಕೊನೆಗೊಂಡಿದೆ. ಅತ್ಯಂತ ಗೌರವಾನ್ವಿತ, ವಿನಮ್ರ ಮತ್ತು ಅಪಾರ ದೂರದೃಷ್ಟಿಯ ನಾಯಕ ಅವರಾಗಿದ್ದರು, ಅವರೊಂದಿಗೆ ಕೆಲವು ಅದ್ಭುತ ಕ್ಷಣಗಳನ್ನು ಕಳೆದಿದ್ದೇವೆ. ಹಲವಾರು ಪ್ರಚಾರಗಳಲ್ಲಿ ಒಟ್ಟಿಗೆ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

Ratan Tata Death

ರತನ್ ಟಾಟಾ ಅವರು ನಿರ್ಮಿಸಿದ ಏಕೈಕ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ನಾಯಕರಾಗಿದ್ದರು. 2004 ರಲ್ಲಿ ಟಾಟಾ ಅವರು ಏತ್ಬಾರ್ ಎಂಬ ಚಲನಚಿತ್ರ ನಿರ್ಮಾಣಕ್ಕೆ ಕೈಹಾಕುವ ಮೂಲಕ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟರು. ವಿಕ್ರಮ್ ಭಟ್ ನಿರ್ದೇಶನದ ರೊಮ್ಯಾಂಟಿಕ್, ಸೈಕಲಾಜಿಕಲ್ ಥ್ರಿಲ್ಲರ್ ಕಥೆಯನ್ನು ಒಳಗೊಂಡ ಈ ಚಿತ್ರದಲ್ಲಿ ಬಾಲಿವುಡ್ ಐಕಾನ್‌ಗಳಾದ ಅಮಿತಾಬ್ ಬಚ್ಚನ್, ಜಾನ್ ಅಬ್ರಹಾಂ ಮತ್ತು ಬಿಪಾಶಾ ಬಸು ನಟಿಸಿದ್ದಾರೆ. ಈ ಚಿತ್ರವನ್ನು ಜತಿನ್ ಕುಮಾರ್ ಜೊತೆಗೆ ಟಾಟಾ ಸಹ-ನಿರ್ಮಾಣ ಮಾಡಿದರು. ಅಮಿತಾಬ್ ಬಚ್ಚನ್ ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವಂತೆ ಚಿತ್ರದ ಪ್ರಚಾರಗಳ ಮೂಲಕ ಅವರಿಬ್ಬರೂ ದೀರ್ಘಕಾಲದ ಒಡನಾಟವನ್ನು ಹೊಂದಿದ್ದರು.

ರತನ್ ಟಾಟಾ ಅವರ ನಿಧನಕ್ಕೆ ದೇಶಾದ್ಯಂತ ಜನರು ಶೋಕ ವ್ಯಕ್ತಪಡಿಸುತ್ತಿದ್ದಾರೆ. ನಾವು ದುಃಖದಲ್ಲಿದ್ದೇವೆ. ನಮ್ಮ ಪ್ರೀತಿಯ ರತನ್ ಅವರ ನಿಧನವನ್ನು ನಾವು ತೀವ್ರ ದುಃಖದಿಂದ ಘೋಷಿಸುತ್ತೇವೆ ಎಂದು ಟಾಟಾ ಕುಟುಂಬ ಹೇಳಿಕೆ ನೀಡಿದೆ.

Ratan Tata Death: ಪರೋಪಕಾರ ಕಲಿತಿದ್ದೇ ಟಾಟಾ ಕುಟುಂಬದಿಂದ; ಸುಧಾ ಮೂರ್ತಿ ಭಾವುಕ ನುಡಿ

ನಾವು ಅವರ ಸಹೋದರರು, ಸಹೋದರಿಯರು ಮತ್ತು ಕುಟುಂಬ. ಇನ್ನು ಮುಂದೆ ಅವರು ವೈಯಕ್ತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಪರಂಪರೆ, ನಮ್ರತೆ, ಔದಾರ್ಯ ಮತ್ತು ಉದ್ದೇಶವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಈ ದುಃಖದ ಸಮಯದಲ್ಲಿ ಅವರನ್ನು ಗೌರವಿಸಲು ನಾವು ಒಗ್ಗೂಡಿದಾಗ ಗೌಪ್ಯತೆಯನ್ನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.