Thursday, 21st November 2024

Ratan Tata Death: 1 ರೂ. ಮೆಸೇಜ್‌ನಿಂದ 2,000 ಕೋಟಿ ರೂ. ಮೌಲ್ಯದ ಟಾಟಾ ನ್ಯಾನೋ ಘಟಕ ಪ.ಬಂಗಾಳದಿಂದ ಗುಜರಾತ್‌ಗೆ ಶಿಫ್ಟ್‌ ಆದ ಕಥೆ

Ratan Tata Death

ಮುಂಬೈ: ಟಾಟಾ ನ್ಯಾನೋ (Tata Nano)-ಕಾರು ಹೊಂದಬೇಕು ಎನ್ನುವ ಕನಸು ಕಂಡಿದ್ದ ಸಾವಿರಾರು ಮಧ್ಯಮ ವರ್ಗದ ಭಾರತೀಯರಿಗೆ ವರವಾಗಿ ಬಂದ ವಾಹನವಿದು. ಕಾರು ಶ್ರೀಮಂತರ ವಾಹನ ಎನ್ನುವ ಮಾತನ್ನು ಸುಳ್ಳಾಗಿಸಿ ಬಡ ವರ್ಗದವರೂ ತಾವ್ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಹೆಮ್ಮೆಯಿಂದ ಓಡಾಡುವಂತೆ ಮಾಡಿದ, ಪ್ರಪಂಚದ ಅತೀ ಕಡಿಮೆ ಬೆಲೆಯ ಕಾರಿದು. ಇದರ ಹಿಂದಿನ ರೂವಾರಿ ಟಾಟಾ ಗ್ರೂಪ್‌ ಎನ್ನುವ ಮಹಾನ್‌ ಉದ್ಯಮ ಸಾಮ್ರಾಜ್ಯವನ್ನು ಬೆಳೆಸಿದ ರತನ್‌ ಟಾಟಾ (Ratan Tata). ಹೌದು, ಟಾಟಾ ನ್ಯಾನೋ ರತನ್‌ ಟಾಟಾ ಅವರ ಕನಸಿನ ಕೂಸಾಗಿತ್ತು. ಕೈಗೆಟಕುವ ದರದಲ್ಲಿ ಕಾರು ಲಭ್ಯವಾಗಬೇಕು ಎನ್ನುವ ಕನಸಿನ ಭಾಗವಾಗಿ ಇದನ್ನು ಅವರು ಆರಂಭಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಉತ್ಪಾದನಾ ಘಟಕ ಆರಂಭಿಸಬೇಕಿದ್ದ ಟಾಟಾ ಮೋಟಾರ್ಸ್‌ ಕೊನೆಯ ಕ್ಷಣದಲ್ಲಿ ಗುಜರಾತ್‌ಗೆ ಶಿಫ್ಟ್‌ ಆಯ್ತು. ಇದಕ್ಕೆ ಕಾರಣವಾಗಿದ್ದು ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಒಂದೇ ಒಂದು ಮೆಸೇಜ್‌. ಅದು ಹೇಗೆ ಎನ್ನುವ ಆಸಕ್ತಿದಾಯಕ ವಿವರ ಇಲ್ಲಿದೆ (Ratan Tata Death).

ಪ್ರಧಾನಿ ನರೇಂದ್ರ ಮೋದಿ ಮತ್ತು ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್‌ ಟಾಟಾ ಅವರ ಗೆಳತನ ಆರಂಭವಾಗಿದ್ದು 2 ದಶಕಗಳ ಹಿಂದೆ. ಪಶ್ಚಿಮ ಬಂಗಾಳದ ಸಿಂಗೂರ್‌ನಲ್ಲಿ ಟಾಟಾ 2,000 ಕೋಟಿ ರೂ. ಮೌಲ್ಯದ ತನ್ನ ನ್ಯಾನೋ ಕಾರಿನ ಉತ್ಪಾದನಾ ಘಟಕ ಆರಂಭಿಸಲು ಸಿದ್ಧತೆ ನಡೆಸಿದಾಗ ಎದುರಾದ ಬಲವಾದ ವಿರೋಧ ಈ ಇಬ್ಬರು ನಾಯಕರನ್ನು ಹತ್ತಿರವಾಗಿಸಿತು.

ರತನ್‌ ಟಾಟಾ ತಮ್ಮ ಕನಸಿನ ಟಾಟಾ ನ್ಯಾನೋ ಕಾರು ಘಟಕವನ್ನು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸಿಂಗೂರು ಗ್ರಾಮದಲ್ಲಿ ಆರಂಭಿಸಲು ಮುಂದಾಗಿದ್ದರು. ಇದಕ್ಕೆ ಅಂದಿನ ಸಿಪಿಎಂ ಸರ್ಕಾರ ಭೂಮಿಯನ್ನೂ ನೀಡಿತ್ತು. ಅದರಂತೆ 2006ರಲ್ಲಿ ಘಟಕ ನಿರ್ಮಾಣದ ಕಾಮಗಾರಿಯೂ ಆರಂಭವಾಗಿತ್ತು. ಆದರೆ ಈ ಘಟಕದಲ್ಲಿ ಸ್ಥಳೀಯರನ್ನು ಕೆಲಸಕ್ಕೆ ಸೇರಿಸಿಕೊಳ್ಳದಿದ್ದನ್ನು ವಿರೋಧಿಸಿ ಮತ್ತು ಕೃಷಿ ಭೂಮಿಯನ್ನು ಕೈಗಾರಿಕೆಗೆ ನೀಡಿದ್ದನ್ನು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬಲವಾಗಿ ವಿರೋಧಿಸಿದರು. ರೈತರ ಹೋರಾಟಕ್ಕೆ ಕೈಜೋಡಿಸಿದ ಮಮತಾ ದೊಡ್ಡ ಮಟ್ಟದ ಪ್ರತಿಭಟನೆ ಆರಂಭಿಸಿದರು.

ಪಶ್ಚಿಮ ಬಂಗಾಳದ ಆಗಿನ ಎಡಪಂಥೀಯ ಸರ್ಕಾರವು ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ ಎಂದು ರೈತರು ಆರೋಪಿಸಿದರು. ʼಟಾಟಾ ಅಲ್ಲಅಟ್ಟಾʼ (Atta not Tata) ಎನ್ನುವ ಘೋಷ ವಾಕ್ಯಗಳ ಮೂಲಕ ರೈತರು ಪ್ರತಿಭಟನೆ ತೀವ್ರಗೊಳಿಸಿದರು. ಪ್ರತಿಭಟನೆ ಎಷ್ಟು ತೀವ್ರವಾಗಿತ್ತೆಂದರೆ ಶೇ. 85ಕ್ಕಿಂತ ಹೆಚ್ಚು ಕಾಮಗಾರಿ ಪೂರ್ಣಗೊಳಿಸಿದ್ದರೂ ಘಟಕವನ್ನು ಟಾಟಾ ಅಲ್ಲಿಂದ ಸ್ಥಳಾಂತರಗೊಳಿಸಲು ತೀರ್ಮಾನಿಸಿತು.

2008ರಲ್ಲಿ ಸುಮಾರು 2 ವರ್ಷಗಳ ಸುದೀರ್ಘ ಪ್ರತಿಭಟನೆಯ ಬಳಿಕ ಟಾಟಾ ಗ್ರೂಪ್‌ ಸುದ್ದಿಗೋಷ್ಠಿಯಲ್ಲಿ ತಮ್ಮ ಘಟಕವನ್ನು ಸಿಂಗೂರಿನಿಂದ ಸ್ಥಳಾಂತರಿಸುವುದಾಗಿ ಪ್ರಕಟಿಸಿತು. ಈ ವೇಳೆ ನರೇಂದ್ರ ಮೋದಿ ಅವರ ಹೆಸರು ಚಾಲ್ತಿಗೆ ಬಂತು.

ʼಸುಸ್ವಾಗತಂʼ

ಈ ವೇಳೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ರತನ್‌ ಟಾಟಾ ಅವರಿಗೆ ʼಸುಸ್ವಾಗತಂʼ ಎಂದು ಎಸ್‌ಎಂಎಸ್‌ ಕಳಿಸಿದರು. ಆ ಮೂಲಕ ಘಟಕವನ್ನು ತಮ್ಮ ರಾಜ್ಯದಲ್ಲಿ ಆರಂಭಿಸಬಹುದು ಎನ್ನುವ ದೊಡ್ಡ ಸಂದೇಶ ದಾಟಿಸಿದರು. ಟಾಟಾ ಅವರೊಂದಿಗೆ ಗುಜರಾತ್‌ನ ಉದ್ಯಮಶೀಲತೆಯನ್ನು ಬೆಸೆಯುವಲ್ಲಿ ಈ ಸಂದೇಶವು ಎಷ್ಟು ಪ್ರಮುಖ ಪಾತ್ರ ವಹಿಸಿದೆ ಎನ್ನುವುದನ್ನು ಆ ಬಳಿಕ ಮೋದಿ ತಿಳಿಸಿದ್ದಾರೆ. ಮೊದಲ ನ್ಯಾನೋ ಕಾರನ್ನು ಹೊರತರುವಾಗ ಮೋದಿ ಆ ಪ್ರಸಂಗವನ್ನು ವಿವರಿಸಿದ್ದು ಹೀಗೆ: “ರತನ್ ಟಾಟಾ ಅವರು ಪಶ್ಚಿಮ ಬಂಗಾಳವನ್ನು ತೊರೆಯುತ್ತಿರುವುದಾಗಿ ಕೋಲ್ಕತ್ತಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದಾಗ, ನಾನು ಅವರಿಗೆ ಗುಜರಾತ್‌ಗೆ ಸ್ವಾಗತ ಎಂದು ಎಸ್‌ಎಂಎಸ್ ಕಳುಹಿಸಿದೆ. ಬಳಿಕ ನಡೆದ್ದು ಇತಿಹಾಸ. ಈ ಮೂಲಕ ಗುಜರಾತ್‌ಗೆ ನ್ಯಾನೋ ಪ್ರಾಜೆಕ್ಟ್‌ ಶಿಫ್ಟ್‌ ಆಯ್ತು. ಈಗ ನಿಮಗೆ 1 ರೂ. ಮೌಲ್ಯದ ಎಸ್ಎಂಎಸ್‌ನ ಬೆಲೆ ಅರಿವಾಗಿರಬಹುದುʼʼ ಎಂದಿದ್ದರು.

ನಂತರದ ಸಂದರ್ಶನವೊಂದರಲ್ಲಿ ರತನ್ ಟಾಟಾ ಅವರು ಗುಜರಾತ್‌ನ ಸನಂದ್‌ನಲ್ಲಿ 1,100 ಎಕರೆಯನ್ನು ನೀಡುವುದಾಗಿ ಮೋದಿ ನೀಡಿದ ಭರವಸೆಯನ್ನು ತ್ವರಿತವಾಗಿ ನೆರವೇರಿಸಿದ್ದನ್ನು ಸ್ಮರಿಸಿಕೊಂಡಿದ್ದರು. “ಕಾರ್ಖಾನೆಯನ್ನು ಗುಜರಾತ್‌ಗೆ ಸ್ಥಳಾಂತರಿಸಲು ಮೋದಿ ನನ್ನನ್ನು ಆಹ್ವಾನಿಸಿದರು. ನಿಮಗೆ ಬೇಕಾದ ಭೂಮಿಯನ್ನು 3 ದಿನಗಳಲ್ಲಿ ನೀಡುವುದಾಗಿ ತಿಳಿಸಿದರು ಮತ್ತು ಅದರಂತೆ ನಡೆದುಕೊಂಡರುʼʼ ಎಂದು ಹೇಳಿದ್ದರು. ಹೀಗೆ 2008ರಲ್ಲಿ ಮೊದಲ ನ್ಯಾನೋ ಕಾರು ಮಾರುಕಟ್ಟೆಗೆ ಬಿಡುಗಡೆಯಾಯಿತು.

ಈ ಸುದ್ದಿಯನ್ನೂ ಓದಿ: Ratan Tata Death: ಟಾಟಾ ಜೊತೆಗಿನ ನೆನಪು ಹಂಚಿಕೊಂಡ ಬಿಗ್ ಬಿ