Friday, 22nd November 2024

Ratan Tata Death: ರತನ್‌ ಟಾಟಾ ಕುರಿತು ತಿಳಿದುಕೊಳ್ಳಲೇ ಬೇಕಾದ ಸಂಗತಿಗಳಿವು

Ratan Tata Death

ಮುಂಬೈ: ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ, ಭಾರತದ ಅದ್ವಿತೀಯ ಉದ್ಯಮಿ, ಕೊಡುಗೈ ದಾನಿ ರತನ್ ಟಾಟಾ (Ratan Tata) ತಮ್ಮ 86ನೇ ವಯಸ್ಸಿನಲ್ಲಿ ಮುಂಬೈಯಲ್ಲಿ ಬುಧವಾರ (ಅಕ್ಟೋಬರ್‌ 9) ಕೊನೆಯುಸಿರೆಳೆದಿದ್ದಾರೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ (Ratan Tata Death). ಅವರ ಕುರಿತಾದ ಕೆಲವು ಕುತೂಹಲಭರಿತ ಮಾಹಿತಿ ಇಲ್ಲಿದೆ.

ಬಾಲ್ಯ: ಭಾರತದ ಅತ್ಯಂತ ಜನಪ್ರಿಯ ವ್ಯಾಪಾರ ಕುಟುಂಬಗಳಲ್ಲಿ ಒಂದಾದ ಟಾಟಾ ಕುಟುಂಬದ ಕುಡಿಯಾಗಿ ರತನ್ ಟಾಟಾ ಅವರು 1937ರ ಡಿಸೆಂಬರ್ 28ರಂದು ಮುಂಬೈಯಲ್ಲಿ ಜನಿಸಿದರು. ಹೆತ್ತವರ ಮಧ್ಯೆ ಬಿರುಕು ಮೂಡಿ ಅವರು ಬೇರ್ಪಟ್ಟ ಹಿನ್ನೆಲೆಯಲ್ಲಿ ರತನ್‌ ಟಾಟಾ ಅವರು 10ರ ಹರೆಯದಲ್ಲೇ ಅಜ್ಜಿಯ ಆಶ್ರಯದಲ್ಲಿ ಬೆಳೆದರು.

ಶಿಕ್ಷಣ: ರತನ್ ಟಾಟಾ ಅವರು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯ (Cornell University)ದಿಂದ ವಾಸ್ತುಶಿಲ್ಪದಲ್ಲಿ ಪದವಿ ಪಡೆದರು. ಬಳಿಕ ಅವರು ಅಮೆರಿಕದ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ (Harvard Business School)ನಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಿದರು.

ವೃತ್ತಿ ಜೀವನದ ಆರಂಭ: ಟಾಟಾ ಗ್ರೂಪ್‌ನೊಂದಿಗೆ ರತನ್ ಟಾಟಾ ಅವರ ವೃತ್ತಿಜೀವನವು 1961ರಲ್ಲಿ ಪ್ರಾರಂಭವಾಯಿತು. ಆರಂಭಿಕ ದಿನಗಳಲ್ಲಿ ಅವರು ಜೆಮ್ಷೆಡ್ಪುರದ ಟಾಟಾ ಸ್ಟೀಲ್ಸ್‌ ಅಂಗಡಿಯಲ್ಲಿ ಕೆಲಸ ಮಾಡಿದರು. ನಂತರ ಅವರು ಟಾಟಾ ಇಂಡಸ್ಟ್ರೀಸ್‌ನಲ್ಲಿ ಅಸಿಸ್ಟಂಟ್‌ ಆಗಿ ಕರ್ತವ್ಯ ನಿರ್ವಹಿಸಿದರು.

ಟಾಟಾ ಗ್ರೂಪ್‌ನ ಜವಾಬ್ದಾರಿ: ರತನ್ ಟಾಟಾ ಅವರು 1991ರಲ್ಲಿ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರಾವಧಿಯಲ್ಲಿ ಸಮೂಹವು ಗಮನಾರ್ಹ ಬೆಳವಣಿಗೆ ಕಂಡಿತು. ಅದರ ಕಾರ್ಯಾಚರಣೆ ಜಾಗತಿಕ ಮಾರುಕಟ್ಟೆಗಳಿಗೆ ವಿಸ್ತರಿಸಿತು ಮತ್ತು ವೈವಿಧ್ಯಮಯ ಕೈಗಾರಿಕೆಗಳಿಗೆ ತೆರೆದುಕೊಂಡಿತು.

ಜಾಗತಿಕ ಮಟ್ಟದಲ್ಲಿ ಬೆಳಗಿದ ವರ್ಚಸ್ಸು: ವ್ಯವಹಾರದಲ್ಲಿನ ಇವರ ಚಾಣಾಕ್ಷ ನಡೆ ಮತ್ತು ದೂರದೃಷ್ಟಿಯ ಕಾರಣದಿಂದ ಟೆಟ್ಲಿ (ಇಂಗ್ಲೆಂಡ್‌), ಕೋರಸ್ (ಇಂಗ್ಲೆಂಡ್‌) ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ (ಇಂಗ್ಲೆಂಡ್‌)ನಂತಹ ಜಾಗತಿಕ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಯಿತು. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟಾಟಾ ಗ್ರೂಪ್‌ನ ಖ್ಯಾತಿಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿತು.

ಟೆಲಿಕಾಂ ಕ್ಷೇತ್ರ: 1996ರಲ್ಲಿ ಟಾಟಾ ಟೆಲಿಸರ್ವೀಸಸ್‌ನೊಂದಿಗೆ ರತನ್ ಟಾಟಾ ಅವರು ಟೆಲಿಕಾಂ ಕ್ಷೇತ್ರಕ್ಕೂ ಕಾಲಿರಿಸಿದರು.

ಟಾಟಾ ಇಂಡಿಕಾ: ಭಾರತದ ವಾಹನ ವಾಹನ ಉದ್ಯಮದಲ್ಲೇ ಮಹತ್ವದ ಮೈಲಿಗಲ್ಲಾದ ಟಾಟಾ ಇಂಡಿಕಾವನ್ನು 1998ರಲ್ಲಿ ರತನ್ ಟಾಟಾ ಅವರ ನಾಯಕತ್ವದಲ್ಲಿ ಟಾಟಾ ಮೋಟಾರ್ಸ್ ಪರಿಚಯಿಸಿತು. ದೇಶೀಯವಾಗಿ ವಿನ್ಯಾಸಗೊಳಿಸಲಾದ ಈ ಪ್ಯಾಸೆಂಜರ್ ಕಾರು ಭಾರತೀಯ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ಟಾಟಾ ನ್ಯಾನೋ: ಜನಸಾಮಾನ್ಯರಿಗೆ ಕಾರು ಒದಗಿಸುವ ರತನ್ ಟಾಟಾ ಅವರ ಕನಸು 2008ರಲ್ಲಿ ಟಾಟಾ ನ್ಯಾನೋ ಬಿಡುಗಡೆಯೊಂದಿಗೆ ನನಸಾಯಿತು. ದೇಶದ ಅತ್ಯಂತ ಅಗ್ಗದ ಕಾರು ಎನಿಸಿಕೊಂಡಿರುವ ಇದು ಕೇವಲ 1 ಲಕ್ಷ ರೂ.ಗೆ ಮಾರಾಟವಾಯಿತು. ಈ ಎಂಜಿನಿಯರಿಂಗ್ ಅದ್ಭುತವು ಅದೇಷ್ಟೋ ಮಧ್ಯ ವರ್ಗದ ಭಾರತೀಯ ಕಾರು ಹೊಂದಬೇಕು ಎನ್ನುವ ಕನಸು ಕೈಗೂಡಲು ಕಾರಣವಾಯಿತು.

ಸ್ಟಾರ್‌ಬಕ್ಸ್‌ನೊಂದಿಗೆ ಒಪ್ಪಂದ: 2012ರಲ್ಲಿ ಟಾಟಾ ಗ್ಲೋಬಲ್ ಬೆವರೇಜಸ್ (Tata Global Beverages) ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿತು. ಜಾಗತಿಕ ಕಾಫಿ ದೈತ್ಯ ಸ್ಟಾರ್‌ಬಕ್ಸ್‌ನೊಂದಿಗೆ ಕೈಜೋಡಿಸಿ ಕಾಫಿ ಮಾರುಕಟ್ಟೆಯಲ್ಲಿ ಕಂಪೆನಿಯ ಪ್ರಾಬಲ್ಯವನ್ನು ಇನ್ನಷ್ಟು ವಿಸ್ತರಿಸಿತು.

ದಾನ: ಯಶಸ್ವಿ ಉದ್ಯಮಿ ಮಾತ್ರವಲ್ಲ ಕೊಡುಗೈ ದಾನಿ ಎಂದೂ ರತನ್‌ ಟಾಟಾ ಹೆಸರು ಗಳಿಸಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ ಅವರು ಟಾಟಾ ಗ್ರೂಪ್‌ನ ಲಾಭದ ಗಣನೀಯ ಭಾಗ ಅಂದರೆ ಸುಮಾರು ಶೇ. 65ರಷ್ಟನ್ನು ಅನ್ನು ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಸ್ಥಾಪಿಸಿದ ಚಾರಿಟಬಲ್ ಟ್ರಸ್ಟ್‌ಗೆ ಸೇರಬೇಕು ಎಂದು ಸೂಚಿಸಿದ್ದಾರೆ.

ನಿವೃತ್ತಿ ನಂತರವೂ ಸೇವೆ: ರತನ್ ಟಾಟಾ ಅವರು 2012ರ ಡಿಸೆಂಬರ್‌ನಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾದರು. ಬಳಿಕ ಅವರು ಟಾಟಾ ಗ್ರೂಪ್‌ಗೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದರು.

ಪ್ರಶಸ್ತಿ: ರತನ್‌ ಟಾಟಾ ಅವರಿ ದೇಶಕ್ಕೆ ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರ ಅವರಿಗೆ 2000ರಲ್ಲಿ ಪದ್ಮಭೂಷಣ ಮತ್ತು 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿತು.

Ratan Tata Death: ನಾಲ್ವರ ಜೊತೆ ಪ್ರಣಯ, ಮದುವೆಯಾಗಲು ಭಯ! ಇದು ರತನ್‌ ಟಾಟಾ ಖಾಸಗಿ ಕಥೆ