Friday, 22nd November 2024

Ratan Tata death : ಸಹಾನುಭೂತಿಯುಳ್ಳ, ಅಸಾಧಾರಣ ವ್ಯಕ್ತಿ; ರತನ್ ಟಾಟಾ ನಿಧನಕ್ಕೆ ಮೋದಿ ಸಂತಾಪ

Ratan Tata death

ನವದೆಹಲಿ: ಟಾಟಾ ಸನ್ಸ್‌ ಸಮೂಹದ ಗೌರವ ಅಧ್ಯಕ್ಷ ರತನ್ ಟಾಟಾ ಅವರ ನಿಧನಕ್ಕೆ (Ratan Tata death) ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಉದ್ಯಮ ಸಂಸ್ಥೆಗಳ ಸ್ಥಿರ ನಾಯಕ ಅವರಾಗಿದ್ದರು ಎಂದು ಟಾಟಾ ಅವರ ಸಾಧನೆಗಳನ್ನು ತಮ್ಮ ಸಂತಾಪ ಸಂದೇಶದಲ್ಲಿ ಕೊಂಡಾಡಿದ್ದಾರೆ.

ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದ ಪ್ರಧಾನಿ ಟಾಟಾ ಅವರೊಂದಿಗಿನ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ. ಟಾಟಾ ಅವರ ಅತ್ಯಂತ ವಿಶಿಷ್ಟ ಗುಣವೇನೆಂದರೆ ದೊಡ್ಡ ಕನಸು ಕಾಣುವುದು ಮತ್ತು ಸಮಾಜಕ್ಕೆ ಹಿಂದಿರುಗಿಸುವುದು ಎಂದು ಬರೆದುಕೊಂಡಿದ್ದಾರೆ.

ಶ್ರೀ ರತನ್ ಟಾಟಾ ಜಿ ಅವರು ದೂರದೃಷ್ಟಿಯ ಔದ್ಯಮಿಕ ನಾಯಕ, ಸಹಾನುಭೂತಿಯುಳ್ಳ ಆತ್ಮ ಮತ್ತು ಅಸಾಧಾರಣ ಮನುಷ್ಯ. ಅವರು ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ವ್ಯಾಪಾರ ಸಂಸ್ಥೆಗಳಲ್ಲಿ ಒಂದಕ್ಕೆ ಸ್ಥಿರ ನಾಯಕತ್ವವನ್ನು ನೀಡಿದವರು. ಅದೇ ಸಮಯದಲ್ಲಿ ಅವರ ಕೊಡುಗೆಗಳು ಸಂಸ್ಥೆಯ ನಿರ್ದೇಶಕರ ಕೊಠಡಿಗೂ ಮೀರಿದ್ದರು. ಅವರ ನಮ್ರತೆ, ದಯೆ ಮತ್ತು ನಮ್ಮ ಸಮಾಜವನ್ನು ಉತ್ತಮಗೊಳಿಸುವ ಅಚಲ ಬದ್ಧತೆಗೆ ಧನ್ಯವಾದಗಳು” ಎಂದು ಮೋದಿ ಬರೆದುಕೊಂಡಿದ್ದಾರೆ.

ಶ್ರೀ ರತನ್ ಟಾಟಾ ಜಿ ಅವರ ಅತ್ಯಂತ ವಿಶಿಷ್ಟ ಅಂಶವೆಂದರೆ ದೊಡ್ಡ ಕನಸು ಕಾಣುವ ಮತ್ತು ಸಮಾಜಕ್ಕೆ ಹಿಂತಿರುಗಿಸುವ ಉತ್ಸಾಹ. ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಪ್ರಾಣಿ ದಯೆ ಮುಂತಾದ ಸೇವಾ ಕಾರ್ಯದಲ್ಲಿ ಅವರು ಮುಂಚೂಣಿಯಲ್ಲಿದ್ದರು” ಎಂದು ಮೋದಿ ಸ್ಮರಿಸಿದ್ದಾರೆ.

ಇದನ್ನೂ ಓದಿ: Ratan Tata Death: ರತನ್ ಟಾಟಾ ಎಲ್ಲ ಉದ್ಯಮಿಗಳಿಗಿಂತ ಭಿನ್ನವಾಗಿದ್ದರು! ಇಲ್ಲಿದೆ ನೋಡಿ ಅದಕ್ಕೆ ಕಾರಣಗಳು

ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಟಾಟಾ ಅವರೊಂದಿಗಿನ ಭೇಟಿಗಳನ್ನು ನೆನಪಿಸಿಕೊಂಡ ಮೋದಿ, ರತನ್‌ ಅವರು ವಿಭಿನ್ನ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಪ್ರಧಾನಿಯಾಗಿ ದೆಹಲಿಗೆ ಬಂದ ಬಳಿಕವೂ ಅವರೊಂದಿಗಿನ ಒಡನಾಟ ಮುಂದುವರಿದವು ಎಂದು ಹೇಳಿಕೊಂಡಿದ್ದಾರೆ.