ಮುಂಬೈ: ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ಉದ್ಯಮಿ ರತನ್ ಟಾಟಾ (Ratan Tata) ತಮ್ಮ 86ನೇ ವಯಸ್ಸಿನಲ್ಲಿ ಮುಂಬೈಯಲ್ಲಿ ಬುಧವಾರ (ಅಕ್ಟೋಬರ್ 9) ಕೊನೆಯುಸಿರೆಳೆದಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು ಅವರ ಅಗಲಿಕೆಗೆ ಕಂಬಿನಿ ಮಿಡಿದ್ದಾರೆ. ಟಾಟಾ ಟ್ರಸ್ಟ್‌ನ ಕಿರಿಯ ಜನರಲ್ ಮ್ಯಾನೇಜರ್, ರತನ್ ಟಾಟಾ ಅವರ ವಿಶ್ವಾಸಾರ್ಹ ಸಹಾಯಕ, ಆಪ್ತ ಸ್ನೇಹಿತ ಶಂತನು ನಾಯ್ಡು (Shantanu Naidu) ಅವರೂ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಆ ಮೂಲಕ ಅಗಲಿದ ಗೆಳೆಯನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ (Ratan Tata Death).
31 ವರ್ಷದ ಶಂತನು ನಾಯ್ಡು ಮತ್ತು ರತನ್ ಟಾಟಾ ಅವರ ಮಧ್ಯೆ ಸುಮಾರು 55 ವರ್ಷಗಳ ಅಂತರವಿದೆ. ಆದರೆ ಇದು ಅವರ ಸ್ನೇಹಕ್ಕೆ ಯಾವತ್ತೂ ಅಡ್ಡಿಯಾಗಿಲ್ಲ.
ಶಂತನು ನಾಯ್ಡು ಪೋಸ್ಟ್‌ನಲ್ಲಿ ಏನಿದೆ?
ʼʼನಮ್ಮ ಗೆಳೆತನದ ಕೊಂಡಿ ಕಳಚಿದೆ. ಈ ಅಂತರವನ್ನು ತುಂಬಲು ಯತ್ನಿಸುತ್ತ ನನ್ನ ಉಳಿದ ಜೀವನವನ್ನು ಕಳೆಯುತ್ತೇನೆ. ದುಃಖವು ಪ್ರೀತಿಗೆ ಪಾವತಿಸಬೇಕಾದ ಬೆಲೆ. ಗುಡ್ ಬೈ ನನ್ನ ಪ್ರೀತಿಯ ಲೈಟ್ ಹೌಸ್” ಎಂದು ಅವರು ಬರೆದುಕೊಂಡಿದ್ದಾರೆ. ಜತೆಗೆ ರತನ್ ಟಾಟಾ ಜತೆಗಿನ ಫೋಟೊ ಹಂಚಿಕೊಂಡಿದ್ದಾರೆ.
ಯಾರು ಈ ಶಂತನು ನಾಯ್ಡು?
1993ರಲ್ಲಿ ಪುಣೆಯ ತೆಲುಗು ಕುಟುಂಬದಲ್ಲಿ ಜನಿಸಿದ ಶಂತನು ನಾಯ್ಡು ಅವರು 2014ರಲ್ಲಿ ತಮ್ಮ ಎಂಜಿನಿಯಿಂಗ್ ಪದವಿಯನ್ನು ಪುಣೆಯ ಸಾವಿತ್ರಿಭಾಯಿ ಫುಲೆ ವಿಶ್ವವಿದ್ಯಾನಿಲಯದಲ್ಲಿ ಪೂರೈಸಿದರು. ನಂತರ ಅವರು 2016ರಲ್ಲಿ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯ (Cornell Johnson Graduate School of Management)ದಿಂದ ಎಂಬಿಎ ಮಾಡಿದರು. ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಶಂತನು ನಾಯ್ಡು ಪುಣೆಯ ಟಾಟಾ ಎಲ್‌ಕ್ಸಿ (Tata Elxsi)ಯಲ್ಲಿ ಆಟೋಮೊಬೈಲ್ ಡಿಸೈನ್ ಎಂಜಿನಿಯರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.
I remember reading “I Came Upon a Lighthouse” by #ShantanuNaidu, a memoir that gave a glimpse into the life of #RatanTata. It showed me the depth of his humility, his love for people and animals, and his profound wisdom. Ratan Tata wasn’t just a business leader — he was a… pic.twitter.com/fY2YIpxfgP
— Priyanka Sharma (@lassiecoder) October 9, 2024
2022ರಲ್ಲಿ ರತನ್ ಟಾಟಾ ಅವರ ಜನ್ಮದಿನವನ್ನು ಆಚರಿಸುತ್ತಿರುವ ವಿಡಿಯೊದಲ್ಲಿ ಶಂತನು ನಾಯ್ಡು ಕಂಡುಬಂದ ಹಿನ್ನಲೆಯಲ್ಲಿ ಅವರು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದರು. ಅದಾದ ಬಳಿಕ ನೆಟ್ಟಿಗರು ಅವರನ್ನು ಗುರುತಿಸತೊಡಗಿದರು. ರತನ್ ಟಾಟಾ ಅವರು ಶಂತನು ನಾಯ್ಡು ಅವರನ್ನು ತಮ್ಮ ಮಗನೆಂದೇ ಪರಿಗಣಿಸಿದ್ದರು. ತಮ್ಮ ಆಪ್ತರ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ.
ನಾಯ್ಡು ಮತ್ತು ಟಾಟಾ ಪರಿಚಯವಾಗಿದ್ದು ಹೇಗೆ?
ಶ್ವಾನಗಳ ಮೇಲೆ ಶಂತನು ಹೊಂದಿದ್ದ ಅಪಾರ ಪ್ರೀತಿಯೇ ಅವರನ್ನು ರತನ್ ಟಾಟಾ ಅವರೊಂದಿಗೆ ಬೆಸೆದಿತ್ತು. ಶಂತನು ನಾಯ್ಡು ಅವರು ಕೆಲವು ವರ್ಷಗಳ ಹಿಂದೆ ರಾತ್ರಿ ಬೀದಿ ನಾಯಿಗಳಿಗೆ ವಾಹನಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸುವುದಕ್ಕಾಗಿ ಪ್ರತಿಫಲಿಸುವ ಬಣ್ಣದ ಕಾಲರ್‌ನ್ನು ಅಭಿವೃದ್ಧಿಪಡಿಸಿದ್ದರು. ಈ ವಿಚಾರ ತಿಳಿದು ಮೊದಲ ಬಾರಿ ರತನ್ ಟಾಟಾ ಅವರು ಶಂತನು ಅವರನ್ನು ಭೇಟಿಯಾದರು. ಶಂತನು ಅವರನ್ನು ಮುಂಬೈಗೆ ಕರೆಸಿಕೊಂಡು ತಮಗಾಗಿ ಕೆಲಸ ಮಾಡಲು ಆಹ್ವಾನಿಸಿದರು. ಅಲ್ಲಿಂದ ಮತ್ತೆ ಇಬ್ಬರ ಮಧ್ಯೆ ಅಪರೂಪದ ಬಾಂಧವ್ಯ ಏರ್ಪಟ್ಟಿತು. ಇತ್ತೀಚಿನ ದಿನಗಳಲ್ಲಿ ರತನ್ ಟಾಟಾ ಅವರ ಜತೆ ಶಂತನು ನಾಯ್ಡು ಸದಾ ಇರುತ್ತಿದ್ದರು.
ಈ ಸುದ್ದಿಯನ್ನೂ ಓದಿ: Ratan Tata death: ಬಾಲಿವುಡ್ಗೂ ಕಾಲಿಟ್ಟಿದ್ದರು ರತನ್ ಟಾಟಾ: ನಿರ್ಮಿಸಿದ ಏಕೈಕ ಸಿನಿಮಾ ಯಾವುದು?