Friday, 22nd November 2024

Ratan Tata Death: ರತನ್ ಟಾಟಾ ಎಲ್ಲ ಉದ್ಯಮಿಗಳಿಗಿಂತ ಭಿನ್ನವಾಗಿದ್ದರು! ಇಲ್ಲಿದೆ ನೋಡಿ ಅದಕ್ಕೆ ಕಾರಣಗಳು

Ratan Tata

ಬೆಂಗಳೂರು: ಭಾರತದಲ್ಲಿ ಸಾವಿರಾರು ಘಟಾನುಘಟಿ ಉದ್ಯಮಿಗಳಿದ್ದಾರೆ. ಅವರಲ್ಲೂ ಕೆಲವರು ಉದ್ಯಮ ದೈತ್ಯರು. ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿದವರು. ಅವರೆಲ್ಲರ ನಡುವೆ ದೇಶದ ಜನರ ಪ್ರೀತಿಗೆ ಅತ್ಯಂತ ಹೆಚ್ಚು ಪಾತ್ರರಾಗಿದ್ದವರು ಟಾಟಾ ಸನ್ಸ್‌ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ (Ratan Tata). ಅದಕ್ಕೆ ಕಾರಣ ನೂರಾರಿವೆ. ಯಾಕೆಂದರೆ ಉಳಿದೆಲ್ಲ ಉದ್ಯಮಗಳಿಗಿಂತ ರತನ್ ಟಾಟಾ ಭಿನ್ನ. ಲಾಭದಾಯಕ ಉದ್ಯಮಗಳ ಜತೆ ದೇಶ, ಸಮಾಜ ಹಾಗೂ ಇಡೀ ಉದ್ಯಮ ಕ್ಷೇತ್ರವನ್ನು ಕಟ್ಟುವ ಕೆಲಸವನ್ನು ಮಾಡಿದವರು. ಉದ್ಯಮ ಹಾಗೂ ಸಮಾಜ ಸೇವೆಯಲ್ಲಿ ಸರಿಸಾಟಿಯಿಲ್ಲದ ಕೆಲಸ ಮಾಡಿದವರು.

86 ವರ್ಷದ ರತನ್ ಟಾಟಾ ಅವರು ಉದ್ಯಮಿಯಾಗಿ ಎಷ್ಟು ಜನಪ್ರಿಯರೋ ಜನೋಪಕಾರಿ ಕೆಲಸದ ಮೂಲಕವೂ ಅಷ್ಟೇ ಪ್ರಖ್ಯಾತಿ ಪಡೆದವರು. ಅವರು ಕಂಡಿರುವ ಯಶಸ್ಸು ಭಾರತದ ಆರ್ಥಿಕತೆಯ ಪ್ರಗತಿ ಎಂಬುದರಲ್ಲಿಎರಡು ಮಾತಿಲ್ಲ. ಅತ್ಯಂತ ನಾಚಿಕೆ ಸ್ವಭಾವದ ಹಾಗೂ ಏಕಾಂಗಿಯಾಗಿಯೇ ಉಳಿದ ರತನ್ ಟಾಟಾ ಎಲ್ಲಿಯೂ ವಿವಾದಕ್ಕೆ ಹಾಗೂ ಅನಗತ್ಯ ಕಾರಣಕ್ಕೆ ಸುದ್ದಿಗೆ ಗ್ರಾಸವಾದವರಲ್ಲ. 2012ರಲ್ಲಿ ತಮ್ಮ 75ನೇ ವಯಸ್ಸಿನಲ್ಲಿ ನಿವೃತ್ತರಾದಾಗ ಎರಡು ದಶಕಗಳಿಗೂ ಹೆಚ್ಚು ಕಾಲ ‘ಟಾಟಾ ಗ್ರೂಪ್’ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಹೊರ ಬಂದಾಗಲೂ ಅಪಾರ ಜನಪ್ರಿಯತೆ ಗಿಟ್ಟಿಸಿಕೊಂಡರು.

ರತನ್‌ ಟಾಟಾ ಅನುಭವಿ ಉದ್ಯಮಿ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ವ್ಯವಹಾರ ಚತುರತೆ, ದೂರದೃಷ್ಟಿಗಿಂತಲೂ ಉದ್ಯಮ ಕ್ಷೇತ್ರದಲ್ಲಿ ಅವರು ಕೊನೇ ತನಕ ಕಾಪಾಡಿಕೊಂಡು ಬಂದಿರುವ ನೈತಿಕತೆ ಎಲ್ಲದಕ್ಕಿಂತ ದೊಡ್ಡದು. ಈ ಮೂಲಕ ಕುಟುಂಬ ವ್ಯವಹಾರವನ್ನು ಅಂತಾರಾಷ್ಟ್ರೀಯ ಉದ್ಯಮ ಸಾಮ್ರಾಜ್ಯವಾಗಿ ಪರಿವರ್ತಿಸಿದ್ದರು. ಅವರ ಅಧಿಕಾರಾವಧಿಯಲ್ಲಿ, ಟಾಟಾ ಗ್ರೂಪ್‌ನ ಆದಾಯ ಅನೇಕ ಪಟ್ಟು ಹೆಚ್ಚಾಗಿತ್ತು. 2011-12 ರಲ್ಲಿ ಒಟ್ಟು 100 ಬಿಲಿಯನ್ ಡಾಲರ್ ಮೌಲ್ಯ ಹೊಂದಿತ್ತು.

ರತನ್ ಟಾಟಾ ಬೆಳವಣಿಗೆ

1937ರಲ್ಲಿ ಪ್ರಸಿದ್ಧ ಟಾಟಾ ಕುಟುಂಬದಲ್ಲಿ ಜನಿಸಿದ ರತನ್ ಟಾಟಾ ಆರಂಭದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದವರು. 10ನೇ ವಯಸ್ಸಿನಲ್ಲಿ ಪೋಷಕರಿಂದ ಬೇರ್ಪಟ್ಟು ಅಜ್ಜಿಯ ಪಾಲನೆಯಲ್ಲಿ ಬೆಳೆದಿದ್ದರು. ಐಷಾರಾಮಿ ಮನೆಯಲ್ಲಿ ಬೆಳೆದರು. ಕಾರ್ನೆಲ್ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರಲ್‌ ಮತ್ತು ಸ್ಟ್ರಕ್ಚರಲ್‌ ಎಂಜಿನಿಯರಿಂಗ್ ಪದವಿ ಮತ್ತು ಹಾರ್ವರ್ಡ್ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಪ್ರೋಗ್ರಾಂ ಪದವಿ ಪಡೆದಿದ್ದರು. ಈ ವೇಳೆ ಅವರಿಗೆ ಐಬಿಎಂನಿಂದ ಉದ್ಯೋಗದ ಅವಕಾಶ ಬಂದಿದ್ದರೂ ಅದನ್ನು ತಿರಸ್ಕರಿಸಿದ್ದರು. ಅವರು 1962ರಲ್ಲಿ ಟೆಲ್ಕೊ (ಈಗ ಟಾಟಾ ಮೋಟಾರ್ಸ್) ಶಾಪ್ ಮೂಲಕ ಕೆಲಸ ಆರಂಭಿಸಿದ್ದರು.

ರತನ್ ಟಾಟಾ ತಮ್ಮ ವೃತ್ತಿಜೀವನವನ್ನು ತಳಮಟ್ಟದಿಂದ ಆರಂಭಿಸಿದ್ದರು. ಟಾಟಾ ಗ್ರೂಪ್‌ನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಅಂತಿಮವಾಗಿ 1971ರಲ್ಲಿ ನ್ಯಾಷನಲ್‌ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ (ನೆಲ್ಕೊ) ನಿರ್ದೇಶಕರಾದರು. ಅಪ್ರೆಂಟಿಸ್‌ನಿಂದ ಆರಂಭಗೊಂಡು ನಿರ್ದೇಶಕರಾಗಲು ಅವರು 9 ವರ್ಷ ಕಷ್ಟಪಟ್ಟು ಕೆಲಸ ಮಾಡಿದರು. ”ಯಾವುದೇ ಬೆಲೆ ತೆತ್ತಾದರೂ ಘನತೆ ಉಳಿಸಿಕೊಳ್ಳಲು ನನ್ನ ಅಜ್ಜಿ ನಮಗೆ ಕಲಿಸಿದ್ದಾರೆ. ಈ ಮೌಲ್ಯ ಎಂದಿಗೂ ನನ್ನೊಂದಿಗೆ ಉಳಿಯಲಿದೆ” ಎಂದು ರತನ್ ಟಾಟಾ ಹೇಳುತ್ತಿದ್ದರು.

ಉದ್ಯಮದಲ್ಲಿ ಎದೆಗಾರಿಕೆ

ದೇಶದ ಮೂಲೆಮೂಲೆಯಲ್ಲೂ ಸಿಗುವ ಏಕೈಕ ಬ್ರಾಂಡ್‌ ಟಾಟಾ. ಟಾಟಾ ಉತ್ಪನ್ನ ಅಥವಾ ಸೇವೆಯನ್ನು ಬಳಸದ ವ್ಯಕ್ತಿಗಳನ್ನು ಹುಡುಕುವುದು ಕಷ್ಟ. ಟಾಟಾ ಸಾಲ್ಟ್‌ನಿಂದ ಟಾಟಾ ಮೋಟಾರ್ಸ್‌ವರೆಗೆ ಜನರ ಆದ್ಯತೆಗೆ ತಕ್ಕ ಹಾಗೆ ಬಳಸುತ್ತಿದ್ದಾರೆ. ಹೀಗೆ ಟಾಟಾ ಭಾರತದ ಅತ್ಯಂತ ಸರ್ವವ್ಯಾಪಿ ಬ್ರಾಂಡ್.

ಟಾಟಾ ಸಮೂಹವನ್ನು ವಿಶ್ವ ಮಟ್ಟಕ್ಕೆ ಏರಿಸಿದ ಖ್ಯಾತಿ ರತನ್ ಅವರದ್ದು. ಟಾಟಾ ಸಮೂಹವು ವಿದೇಶಿ ಕಂಪನಿಗಳನ್ನು ತೆಕ್ಕೆಗೆ ತೆಗೆದುಕೊಳ್ಳುವ ವೇಳೆ ಅಪಾರ ರ್ಧೈರ್ಯ ತೋರಿದ್ದರು. ಟೆಟ್ಲಿ 431.3 ಮಿಲಿಯನ್ ಡಾಲರ್, ಕೋರಸ್ 11.3 ಬಿಲಿಯನ್ ಡಾಲರ್, ಜಾಗ್ವಾರ್ ಲ್ಯಾಂಡ್ ರೋವರ್ 2.3 ಬಿಲಿಯನ್ ಡಾಲರ್, ಬ್ರನ್ನರ್ ಮಾಂಡ್, ಜನರಲ್ ಕೆಮಿಕಲ್ ಇಂಡಸ್ಟ್ರಿಯಲ್ ಪ್ರಾಡಕ್ಟ್ಸ್ ಮತ್ತು ಡೇವೂ ಸಂಸ್ಥೆಯನ್ನು 102 ಮಿಲಿಯನ್ ಡಾಲರ್‌ಗೆ ಸ್ವಾಧೀನಪಡಿಕೊಳ್ಳುವುದಕ್ಕೆ ಅವರು ಕಾರಣರಾಗಿದ್ದರು.

ಈ ಮೂಲಕ ಟಾಟಾ ಗ್ರೂಪ್ 100ಕ್ಕೂ ಹೆಚ್ಚು ದೇಶಗಳನ್ನು ತಲುಪಿದೆ. ಜತೆಗೆ ಭಾರತೀಯ ಕೈಗಾರಿಕಾ ಕ್ಷೇತ್ರಕ್ಕೆ ಗಮನಾರ್ಹ ಉತ್ತೇಜನ ನೀಡಿತು. ಕಂಪನಿಯು ಪ್ರಪಂಚದಾದ್ಯಂತದ ಹೋಟೆಲ್‌ಗಳು, ರಾಸಾಯನಿಕ ಕಂಪನಿಗಳು, ಸಂವಹನ ಜಾಲಗಳು ಮತ್ತು ಇಂಧನ ಪೂರೈಕೆದಾರ ಕಂಪನಿಗಳನ್ನು ತೆಕ್ಕೆಗೆ ತೆಗೆದುಕೊಂಡಿತು.

ಎಲ್ಲದಿಕ್ಕಿಂತ ಹೆಚ್ಚಾಗಿ ಏರ್ ಇಂಡಿಯಾವನ್ನು ಮತ್ತೆ ಟಾಟಾ ಮಡಿಲಿಗೆ ತೆಗೆದುಕೊಂಡಿದ್ದು ದೊಡ್ಡ ಸಾಧನೆ. ಏರ್‌ ಇಂಡಿಯಾ ಅವರ ಚಿಕ್ಕಪ್ಪ ಮತ್ತು ಮಾರ್ಗದರ್ಶಕ ಜಹಾಂಗೀರ್ ರತನ್‌ಜಿ ದಾದಾಭಾಯ್ ಟಾಟಾ ಅವರು 1932ರಲ್ಲಿ ಸ್ಥಾಪಿಸಿದ ವಿಮಾನಯಾನ ಸಂಸ್ಥೆ.

ಅಪಾಯ ತೆಗೆದುಕೊಳ್ಳದಿರುವುದು ದೊಡ್ಡ ಅಪಾಯ. ಜಗತ್ತಿನಲ್ಲಿ ವಿಫಲವಾಗುವ ಏಕೈಕ ತಂತ್ರವೆಂದರೆ ಅಪಾಯಗಳನ್ನು ಎದುರಿಸದೇ ಇರುವುದು ಎಂದು ರತನ್‌ ಟಾಟಾ ಯಾವಾಗಲೂ ಹೇಳುತ್ತಿದ್ದರು.

ಅಗತ್ಯಕ್ಕೆ ತಕ್ಕ ಹಾಗೆ ಉತ್ಪನ್ನಗಳು

ಜನರ ಅಗತ್ಯತೆಗಳು ಮತ್ತು ದೈನಂದಿನ ಜೀವನಕ್ಕೆ ತಕ್ಕ ಹಾಗೆ ಉತ್ಪನ್ನಗಳನ್ನು ಬಿಡುಗಡೆ ಮಾಡಿದವರು ಟಾಟಾ. ಅವರಿಗೆ ಭಾರತೀಯ ಮಾರುಕಟ್ಟೆಯ ನಾಡಿಮಿಡಿತ ಗೊತ್ತಿತ್ತು ವಿಶ್ವದ ಅಗ್ಗದ ಬೆಲೆತ ಕಾರು ಟಾಟಾ ನ್ಯಾನೋ ಅವರ ಪರಿಕಲ್ಪನೆ. ನಿಜವಾದ ಭಾರತೀಯ ಕಾರು ಎಂದು ಮೊದಲು ಗುರುತಿಸಿಕೊಂಡಿದ್ದ ಟಾಟಾ ಇಂಡಿಕಾ.

ಮುಂಬಯಿಯಲ್ಲಿ ಸುರಿಯುತ್ತಿದ್ದ ಭಾರೀ ಮಳೆಯ ನಡುವೆ ಒಂದು ಮೋಟಾರುಬೈಕಿನಲ್ಲಿ ನಾಲ್ವರು ಪ್ರಯಾಣಿಸುತ್ತಿರುವುದನ್ನು ನೋಡಿದ ಟಾಟಾ ಪುಟ್ಟ ಕುಟುಂಬಕ್ಕಾಗಿ ನ್ಯಾನೊ ಕಾರು ತಯಾರಿಸಿದವರು. ಆದರೆ, ‘ಬಡವರ ಕಾರು’ ಎಂಬ ಟ್ಯಾಗ್‌ಲೈನ್‌ ನ್ಯಾನೊ ವೈಫಲ್ಯಕ್ಕೆ ಕಾರಣವಾಗಿದ್ದು ವಿಪರ್ಯಾಸ.

ಮಹಾನ್‌ ದಾನಿ

ರತನ್ ಟಾಟಾ ಅವರ ಔದ್ಯಮಿಕ ದೃಷ್ಟಿಕೋನ ಲಾಭವನ್ನು ಮೀರಿ ವಿಸ್ತರಿಸಿದೆ. ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2021ರಲ್ಲಿ ರತನ್ ಟಾಟಾ 433ನೇ ಸ್ಥಾನದಲ್ಲಿದ್ದಾರೆ. ಅವರು ಅತ್ಯಂತ ಉದಾರ ವ್ಯಕ್ತಿ.

ಭಾರತದ ಅತಿದೊಡ್ಡ ದತ್ತಿ ಸಂಸ್ಥೆಗಳಲ್ಲಿ ಒಂದಾದ ಅವರ ಪ್ರತಿಷ್ಠಾನ ಟಾಟಾ ಟ್ರಸ್ಟ್‌ಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸಲು ಮತ್ತು ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಸುಸ್ಥಿರ ಜೀವನಕ್ಕೆ ಸಂಬಂಧಿಸಿದ ಯೋಜನೆಗಳನ್ನು ಕೈಗೊಳ್ಳುತ್ತಿವೆ. ಕೊರೊನಾ ಕಾಲದಲ್ಲಿ ಅವರು 500 ಕೋಟಿ ರೂ.ಗಳನ್ನು ದೇಣಿಗೆ ನೀಡಿದ್ದರು.

ರತನ್ ಟಾಟಾ ಅವರು ತಮ್ಮ ಅಲ್ಮಾ ಮೇಟರ್ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ಗೆ ಎಕ್ಸೆಕ್ಯುಟಿವ್‌ ಸೆಂಟರ್‌ ನಿರ್ಮಿಸಲು 50 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ. ಟಾಟಾ ಟ್ರಸ್ಟ್‌ಗಳು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ವಿವಿಧ ಐಐಎಂ ಕ್ಯಾಂಪಸ್‌ಗಳಿಗೆ ಹಣಕಾಸು ನೆರವು ಒದಗಿಸಿವೆ.

ಮುಂಬೈನಲ್ಲಿ ನಡೆದ 26/11ರ ಭಯೋತ್ಪಾದಕರ ದಾಳಿಯಲ್ಲಿ ಸಿಲುಕಿ ನಲುಗಿದವರಿಗೆ ಸಹಾಯ ಮಾಡಲು ‘ತಾಜ್ ಪಬ್ಲಿಕ್ ಸರ್ವಿಸ್ ವೆಲ್ಫೇರ್ ಟ್ರಸ್ಟ್’ ಅನ್ನು ಸ್ಥಾಪಿಸಿದ್ದರು.

ಯುವ ಉದ್ಯಮಿಗಳು ಆರಂಭಿಸುವ ಸ್ಟಾರ್ಟ್‌ಅಪ್‌ಗಳಿಗೆ ಸಾಕಷ್ಟು ಬೆಂಬಲ ಕೊಟ್ಟಿದ್ದಾರೆ. 50ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಬೆಳೆಸಿದ್ದಾರೆ. ಲೆನ್ಸ್‌ಕಾರ್ಟ್‌, ಪೇಟಿಎಂ, ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಆನ್‌ಲೈನ್‌ ಸ್ಟಾಕ್ ಟ್ರೇಡಿಂಗ್ ಪ್ಲಾಟ್ಫಾರ್ಮ್ ಅಪ್‌ಸ್ಟಾಕ್‌, ಬಿಗ್ ಬಾಸ್ಕೆಟ್ ಇದರಲ್ಲಿ ಸೇರಿವೆ.

ಇದನ್ನೂ ಓದಿ: Sanjiv Khanna: ಸುಪ್ರೀಂ ಕೋರ್ಟ್‌ ಮುಂದಿನ ಸಿಜೆಐ ನ್ಯಾ. ಸಂಜೀವ್ ಖನ್ನಾ ಹಿನ್ನೆಲೆ ಏನು?

ನಾಯಿಗಳ ಮೇಲೆಯೂ ಅವರಿಗೆ ಅಪಾರ ಪ್ರೀತಿ. ಬಾಂಬೆ ಹೌಸ್‌ನಲ್ಲಿರುವ ಟಾಟಾ ಸನ್ಸ್‌ನ ಗ್ಲೋಬಲ್‌ ಹೆಡ್ ಆಫೀಸ್‌ ಹಲವಾರು ಬೀದಿ ನಾಯಿಗಳಿಗೆ ನೆಲೆಯಾಗಿದೆ. ಅದೇ ರೀತಿ ಬೀದಿ ನಾಯಿಗಳಿಗೆ ರಿಫ್ಲೆಕ್ಟಿವ್ ಕಾಲರ್ಸ್‌ ಒದಗಿಸುವ ಮೋಟೋಪಾವ್ಸ್‌ಗೆ ದೇಣಿಗೆ ನೀಡಿದ್ದರು.

ಪ್ರಶಸ್ತಿಗಳ ಆಭರಣ

ಉದ್ಯಮ ಮತ್ತು ಸಮಾಜ ಸೇವೆಗೆ ಅವರು ನೀಡಿದ ಕೊಡುಗೆಗಳನ್ನು ಗುರುತಿಸಿದ ಭಾರತ ಸರ್ಕಾರವು ಅವರಿಗೆ 2000 ರಲ್ಲಿ ಪದ್ಮಭೂಷಣ ಮತ್ತು 2008ರಲ್ಲಿ ಪದ್ಮ ವಿಭೂಷಣ ನೀಡಿದೆ. ಇವೆರಡೂ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು. ಅವರು ಭಾರತ ಮತ್ತು ವಿದೇಶಗಳ ಹಲವಾರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಅವರಿಗೆ ಭಾರತ ರತ್ನ ನೀಡಬೇಕು ಎಂಬ ಅಭಿಯಾನ ನಡೆಯುತ್ತಿದೆ.

ಇಂಥ ಅಪರೂಪದ ಟಾಟಾ ಈಗ ನಮ್ಮನ್ನು ಅಗಲಿದ್ದಾರೆ. ಟಾಟಾ…ಹೋಗಿ ಬನ್ನಿ…