ಮುಂಬೈ: ಭಾರತದ ಸೂಪರ್ ಸಿರಿವಂತರಲ್ಲಿ ಒಬ್ಬರಾಗಿದ್ದ ರತನ್ ಟಾಟಾ (Ratan Tata) ಅವರು ಇತ್ತೀಚೆಗೆ ವಿಧಿವಶರಾಗಿದ್ದಾರೆ. ಅವರ ಸಾವು ನಮ್ಮ ದೇಶಕ್ಕೆ ತುಂಬಲಾರದ ನಷ್ಟ. ಭಾರತದ ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿದ್ದರೂ ರತನ್ ಟಾಟಾ ಸರಳ ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು. ಅವರ ಬಳಿ ಹಲವಾರು ತಲೆಮಾರಿನವರು ಕುಳಿತು ತಿನ್ನುವಷ್ಟು ಹಣವಿತ್ತು. ಆದರೆ ಅವರು ಮಾತ್ರ ಸರಳ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದರು. ಸಾಮಾನ್ಯವಾಗಿ ಐಷಾರಾಮಿ ಜೀವನ ನಡೆಸುವಂತಹ ವ್ಯಕ್ತಿಗಳು ಲಕ್ಷ, ಕೋಟಿ ಬೆಲೆಬಾಳುವಂತಹ ವಸ್ತುಗಳನ್ನು ಧರಿಸಿ ತಮ್ಮ ಶ್ರೀಮಂತಿಕೆಯನ್ನು ತೋರಿಸುತ್ತಾರೆ. ಆದರೆ ರತನ್ ಟಾಟಾ ಅವರು ಇದರಿಂದ ದೂರ ಉಳಿದಿದ್ದರು. ದುಬಾರಿ ಬೆಲೆಯ ವಸ್ತುಗಳಿಗಿಂತ ಸರಳವಾದ ವಸ್ತುಗಳನ್ನು ಉಪಯೋಗಿಸುತ್ತಿದ್ದರು. ಇದಕ್ಕೆ ಒಂದು ಬೆಸ್ಟ್ ಉದಾಹರಣೆ ಇಲ್ಲಿದೆ.
ರತನ್ ಟಾಟಾ ಅವರು ಮುಂಬಯಿಯ ಕೊಲಾಬಾದಲ್ಲಿ 200 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ, ಖಾಸಗಿ ಜೆಟ್, ಫೆರಾರಿ ಕ್ಯಾಲಿಫೋರ್ನಿಯಾ ಟಿ ಮತ್ತು ಜಾಗ್ವಾರ್ ಎಫ್-ಟೈಪ್ ಸೇರಿದಂತೆ ಐಷಾರಾಮಿ ಕಾರುಗಳ ಸಂಗ್ರಹವನ್ನು ಹೊಂದಿದ್ದರು. ಆದರೆ ಅವರು ಈ ಮೂಲಕ ತಮ್ಮ ಶ್ರೀಮಂತಿಕೆಯನ್ನು ಯಾವತ್ತೂ ತೋರ್ಪಡಿಸಿಲ್ಲ. ಅವರು ಸರಳವಾದ ಜೀವನ ನಡೆಸುತ್ತಿದ್ದರು. ರತನ್ ಟಾಟಾ ಅವರ ವಾಚ್‌ನ ಕುರಿತಾದ ಫೋಟೊವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕೆಲವು ಶ್ರೀಮಂತರು ತಮ್ಮ ಶ್ರೀಮಂತಿಕೆ, ಅಂತಸ್ತನ್ನು ತೋರಿಸಲು ಲಕ್ಷ, ಕೋಟಿ ಬೆಲೆಬಾಳುವಂತಹ ಅಪರೂಪದ ವಾಚ್‍ಗಳನ್ನು ಕೈಗೆ ಕಟ್ಟಿಕೊಂಡು ತಿರುಗಾಡುತ್ತಾರೆ. ಆದರೆ ರತನ್ ಟಾಟಾ ಅವರು ಮಾತ್ರ ಇದಕ್ಕೆ ತದ್ವಿರುದ್ಧರಾಗಿದ್ದರು. ಟಾಟಾ ಅವರು ತಮ್ಮ ಕೈಯಲ್ಲಿ ಕ್ವಾರ್ಟ್ಜ್ ಚಾಲಿತ ವಿಕ್ಟೋರಿನಾಕ್ಸ್ ಸ್ವಿಸ್ ಆರ್ಮಿ ರೆಕಾನ್ ವಾಚ್ ಧರಿಸಿದ್ದರಂತೆ. ಇದಕ್ಕೆ ಸಂಬಂಧಪಟ್ಟ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೋಟಿ ಮೌಲ್ಯದ ವಾಚ್ ಧರಿಸುವ ಅವಕಾಶವಿದ್ದರೂ, ರತನ್ ಟಾಟಾ ಅವರು ಧರಿಸಿದ್ದು ಮಾತ್ರ ಸರಳವಾದ ವಾಚ್. ಈ ವಾಚ್ ಅನ್ನು ಪ್ರೆಸ್-ಆನ್-ಬ್ಯಾಕ್ ಪ್ಲಾಸ್ಟಿಕ್ ಕೇಸ್‍ನಲ್ಲಿ ಇರಿಸಲಾಗಿದ್ದು, ಅದರಲ್ಲಿ 3, 6 ಮತ್ತು 9 ಸಂಖ್ಯೆಗಳನ್ನು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ. ಈ ವಾಚ್ ಬೆಲೆ 10,328 ರೂ. ಅಷ್ಟೇ.
ಇದನ್ನೂ ಓದಿ:ನುಸ್ಸೆರ್ವಾನ್ಜಿಯಿಂದ ಹಿಡಿದು ಮಾಯಾ ಟಾಟಾವರೆಗೆ… ರತನ್ ಟಾಟಾ ವಂಶವೃಕ್ಷದ ಬಗ್ಗೆ ಇಲ್ಲಿದೆ ಮಾಹಿತಿ
ಕೋಟ್ಯಧಿಪತಿ ರತನ್ ಟಾಟಾ ಅವರು ಕೇವಲ ಸಾವಿರ ಮೌಲ್ಯದ ವಾಚ್ ಧರಿಸಿದ್ದರು ಎಂದಾಗಲೇ ತಿಳಿಯುತ್ತದೆ ಅವರು ಸರಳತೆಗೆ ಎಷ್ಟರ ಮಟ್ಟಿಗೆ ಬೆಲೆ ನೀಡುತ್ತಾರೆ ಎಂದು. ಈ ಮೂಲಕ ಶ್ರೀಮಂತಿಕೆ ಎನ್ನುವುದು ತೋರ್ಪಡಿಕೆ ಅಲ್ಲ ಎಂಬುದನ್ನು ರತನ್ ಟಾಟಾ ಅವರು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಇಂತಹ ಮಹಾನ್, ಸಜ್ಜನ ವ್ಯಕ್ತಿ ಮತ್ತೆ ನಮ್ಮ ದೇಶದಲ್ಲಿ ಹುಟ್ಟಿ ಬರಲಿ ಎಂದು ಆಶಿಸೋಣ, ಹಾಗೇ ನಾವೂ ಕೂಡ ಅವರ ಆದರ್ಶಗಳನ್ನು ಪಾಲಿಸೋಣ.