Friday, 22nd November 2024

Ratan Tata: ಹಿರಿಯ ಉದ್ಯಮಿ ರತನ್ ಟಾಟಾ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

Ratan Tata

ಮುಂಬೈ: ಹಿರಿಯ ಕೈಗಾರಿಕೋದ್ಯಮಿ, ದೇಶದ ಅತಿದೊಡ್ಡ ಸಮೂಹ ಟಾಟಾ ಸನ್ಸ್‌ (TATA Sons)ನ ಮಾಜಿ ಅಧ್ಯಕ್ಷ ರತನ್ ಟಾಟಾ (Ratan Tata) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತದೊತ್ತಡದಲ್ಲಿ ತೀವ್ರ ಕುಸಿತದ ನಂತರ ಇಂದು (ಅಕ್ಟೋಬರ್‌ 7) ಮುಂಜಾನೆ ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಅವರನ್ನು ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, “ಆತಂಕಕ್ಕೆ ಯಾವುದೇ ಕಾರಣವಿಲ್ಲ” ಎಂದು ಸ್ವತಃ ಅವರು ತಿಳಿಸಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ತಮ್ಮ ಆರೋಗ್ಯದ ಬಗ್ಗೆ ಎಕ್ಸ್‌ (ಹಿಂದಿನ ಟ್ವಿಟ್ಟರ್‌)ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ನನ್ನ ಆರೋಗ್ಯದ ಬಗ್ಗೆ ಇತ್ತೀಚೆಗೆ ಹರಡುತ್ತಿರುವ ವದಂತಿಗಳ ಬಗ್ಗೆ ತಿಳಿದು ಬಂದಿದೆ. ಈ ಹೇಳಿಕೆಗಳು ಆಧಾರರಹಿತ ಎಂದು ನಾನು ಸ್ಪಷ್ಟಪಡಿಸುತ್ತೇನೆ. ವಯಸ್ಸಿನ ಕಾರಣದಿಂದ ನಾನು ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದೇನೆ. ಆತಂಕಕ್ಕೆ ಯಾವುದೇ ಕಾರಣವಿಲ್ಲ. ನಾನು ಉತ್ಸಾಹದಲ್ಲಿದ್ದೇನೆ ಮತ್ತು ಸಾರ್ವಜನಿಕರು ಮತ್ತು ಮಾಧ್ಯಮಗಳು ತಪ್ಪು ಮಾಹಿತಿಯನ್ನು ಹರಡದಂತೆ ವಿನಂತಿಸುತ್ತೇನೆ” ಎಂದು 86 ವರ್ಷದ ರತನ್‌ ಟಾಟಾ ತಿಳಿಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತದೆ.

ಇತ್ತೀಚೆಗೆ ರತನ್ ಟಾಟಾ ಅವರಿಗೆ ಪ್ರತಿಷ್ಠಿತ ಕಿಸ್ ಮಾನವೀಯ ಪ್ರಶಸ್ತಿ 2021 (KISS Humanitarian Award 2021) ಪ್ರದಾನ ಮಾಡಲಾಗಿತ್ತು. ಪ್ರಶಸ್ತಿ ಪ್ರದಾನ ಸಮಾರಂಭವು ಮುಂಬೈಯ ಅವರ ನಿವಾಸದಲ್ಲಿ ಆಯೋಜಿಸಲಾಗಿತ್ತು. ಸಾಮಾಜಿಕ ಅಭಿವೃದ್ಧಿ ಮತ್ತು ಅನುಕರಣೀಯ ಕಾರ್ಪೊರೇಟ್ ನಾಯಕತ್ವಕ್ಕೆ ಪರಿಗನಿಸಿ ಈ ಪ್ರಶಸ್ತಿ ನೀಡಲಾಗಿದೆ.

ಟಾಟಾ ಗ್ರೂಪ್‌ ಅಧ್ಯಕ್ಷರಾಗಿ ಸುಮಾರು ಎರಡೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ ರತನ್‌ ಟಾಟಾ, 2012ರಲ್ಲಿ ತಮ್ಮ 75ನೇ ಜನ್ಮದಿನದಂದೇ ನಿವೃತ್ತಿ ಹೊಂದಿದ್ದರು. ರತನ್ ಟಾಟಾ ಅವರು 1937ರ ಡಿಸೆಂಬರ್ 28ರಂದು ಜನಿಸಿದರು. ಉದ್ಯಮದ ಹೊರತಾಗಿ ಅವರು ತಮ್ಮ ಸಾಮಾಜಿಕ ಕಾರ್ಯಗಳಿಂದಲೂ ಚಿರಪರಿಚಿತರಾಗಿದ್ದಾರೆ. ಇವರಿಗೆ ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮ ವಿಭೂಷಣ್‌ (2008), ಪದ್ಮ ಭೂಷಣ್‌ (2000) ಸೇರಿದಂತೆ ಹಲವು ಗೌರವ ಸಂದಿವೆ.

ರತನ್‌ ಟಾಟಾ ಅವರು 1990ರಿಂದ 2012ರವರೆಗೆ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದರು. 2016ರ ಅಕ್ಟೋಬರ್‌ನಿಂದ 2017ರ ಫೆಬ್ರವರಿ ತನಕ ಮಧ್ಯಂತರ ಅಧ್ಯಕ್ಷರಾಗಿದ್ದರು. ಟಾಟಾ ಗ್ರೂಪ್‌ನ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷರಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಟಾರ್ಟ್‌ ಅಪ್‌ಗಳಿಗೂ ಉತ್ತೇಜನ ನೀಡುವ ಅವರು ಇದುವರೆಗೆ ಸುಮಾರು 30ಕ್ಕೂ ಅಧಿಕ ಸ್ಟಾರ್ಟ್‌ ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಬೇಕೆಂಬ ಆಗ್ರಹ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.

ಈ ಸುದ್ದಿಯನ್ನೂ ಓದಿ: PM Modi Meets Muizzu: ಮೋದಿ ಜತೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು ಮಾತುಕತೆ