Friday, 22nd November 2024

Ratan Tata: 1996ರಲ್ಲಿ ಪಿ ವಿ ನರಸಿಂಹ ರಾವ್‌ಗೆ ರತನ್ ಟಾಟಾ ಬರೆದ ಲೆಟರ್‌ ವೈರಲ್‌; ಪತ್ರದಲ್ಲೇನಿದೆ?

Ratan tata

ನವದೆಹಲಿ: ಉದ್ಯಮ ಕ್ಷೇತ್ರ ದಿಗ್ಗಜ ದಿವಂಗತ ರತನ್ ಟಾಟಾ(Ratan Tata) ಆರ್‌ಪಿಜಿ ಗ್ರೂಪ್ ಅಧ್ಯಕ್ಷ ಹರ್ಷ್ ಗೋಯೆಂಕಾ(Harsh Goenka) ಅವರು ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. 1996 ರಲ್ಲಿ ರತನ್ ಟಾಟಾ ಅವರು ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರನ್ನು ಉದ್ದೇಶಿಸಿ ಬರೆದ ಪತ್ರವೊಂದನ್ನು ಹಂಚಿಕೊಂಡು ಅಗಲಿದ ಟಾಟಾ ಅವರನ್ನು ಸ್ಮರಿಸಿದ್ದಾರೆ. ಪತ್ರದಲ್ಲಿ ಟಾಟಾ ಅವರು ಪಿ.ವಿ ನರಸಿಂಹ ರಾವ್‌ ಅವರ ಆರ್ಥಿಕ ಸುಧಾರಣೆಗೆ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ.

1996 ರಲ್ಲಿ ಭಾರತದ ಆರ್ಥಿಕತೆಯ ದಿಕ್ಕನ್ನೇ ಬದಲಾಯಿಸಿದ ಮತ್ತು ಅದನ್ನು ಚೇತರಿಕೆ, ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಸಿದ್ದಕ್ಕಾಗಿ ಮಾಜಿ ಪ್ರಧಾನಿ ನರಸಿಂಹ ರಾವ್ ಅವರನ್ನು ಸಾಮಾನ್ಯವಾಗಿ ‘ಭಾರತೀಯ ಆರ್ಥಿಕ ಸುಧಾರಣೆಗಳ ಪಿತಾಮಹ’ ಎಂದು ಕರೆಯಲಾಗುತ್ತದೆ. ಭಾರತವನ್ನು ಜಾಗತಿಕ ಸಮುದಾಯದ ಭಾಗವನ್ನಾಗಿ ಮಾಡಿದ್ದಕ್ಕಾಗಿ ರಾವ್ ಅವರನ್ನು ಶ್ಲಾಘಿಸುತ್ತಾ, ಟಾಟಾ ಪತ್ರವೊಂದನ್ನು ಬರೆದಿದ್ದರು. ಭಾರತದ ಆರ್ಥಿಕತೆಗೆ ನಿಮ್ಮ ಅಭೂತಪೂರ್ವ ಕೊಡುಗೆಗೆ ಪ್ರತಿ ಭಾರತೀಯ ಚಿರಋಣಿ ಎಂದು ಬರೆದಿದ್ದರು.

ಇದೀಗ ಗೋಯೆಂಕಾ ಅವರು ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಪತ್ರವು ಭಾರತದ ಪ್ರಗತಿಗೆ ಟಾಟಾ ಅವರ ಅಚಲ ಬದ್ಧತೆಯನ್ನು ನೆನಪಿಸುತ್ತದೆ. ಸುಂದರ ವ್ಯಕ್ತಿಯಿಂದ ಸುಂದರವಾದ ಬರಹ…. ಎಂದು ಪೋಸ್ಟ್‌ ಮಾಡಿದ್ದಾರೆ.

ಪತ್ರದಲ್ಲೇನಿದೆ?

ಆಗಸ್ಟ್ 27, 1996

ಆತ್ಮೀಯ ಶ್ರೀ ನರಸಿಂಹ ರಾವ್,

ಭಾರತದಲ್ಲಿ ಹೆಚ್ಚು ಅಗತ್ಯವಿರುವ ಆರ್ಥಿಕ ಸುಧಾರಣೆಗಳನ್ನು ಘೋಷಿಸುವಲ್ಲಿ ನಿಮ್ಮ ಅತ್ಯುತ್ತಮ ಸಾಧನೆಯನ್ನು ನಾನು ಯಾವಾಗಲೂ ಗುರುತಿಸುತ್ತೇನೆ ಮತ್ತು ಗೌರವಿಸುತ್ತೇನೆ ಎಂದು ಹೇಳಲು ನಿಮಗೆ ಈ ಪತ್ರ ಬರೆಯುತ್ತಿದ್ದೇನೆ. ನೀವು ಮತ್ತು ನಿಮ್ಮ ಸರ್ಕಾರವು ಭಾರತವನ್ನು ಆರ್ಥಿಕ ವಿಚಾರದಲ್ಲಿ ವಿಶ್ವ ಭೂಪಟದಲ್ಲಿ ಅತ್ಯುತ್ತಮ ಸ್ಥಾನಕ್ಕೆ ಒಯ್ದಿದೆ. ಮತ್ತು ನಮ್ಮನ್ನು ಜಾಗತಿಕ ಸಮುದಾಯದ ಭಾಗವಾಗಿ ಮಾಡಿದೆ. ಭಾರತದ ಧೈರ್ಯ ಮತ್ತು ದೂರದೃಷ್ಟಿಯ “ತೆರೆಯುವಿಕೆ”ಗಾಗಿ ಪ್ರತಿಯೊಬ್ಬ ಭಾರತೀಯನು ನಿಮಗೆ ಕೃತಜ್ಞತೆಯ ಸಲ್ಲಿಸಬೇಕು. ನಿಮ್ಮ ಸಾಧನೆಗಳು ಮಹತ್ವಪೂರ್ಣ ಮತ್ತು ಮಹೋನ್ನತವಾಗಿವೆ ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ – ಮತ್ತು ಅವುಗಳನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.

ಈ ಸಮಯದಲ್ಲಿ ನನ್ನ ಶುಭಾಶಯಗಳು ನಿಮ್ಮೊಂದಿಗಿವೆ ಮತ್ತು ಭಾರತಕ್ಕಾಗಿ ನೀವು ಕೊಟ್ಟಿರುವ ಕೊಡುಗೆಯನ್ನು ನಾನು ಎಂದಿಗೂ ಮರೆಯಲಾರೆ ಎಂಬುದನ್ನು ಈ ಮೂಲಕ ತಿಳಿಸುತ್ತಿದ್ದೇನೆ.

ಆತ್ಮೀಯ ವೈಯಕ್ತಿಕ ಶುಭಾಶಯಗಳೊಂದಿಗೆ,

ಇತೀ ತಮ್ಮ ವಿಶ್ವಾಸಿ

ರತನ್‌

ಇನ್ನು ಈ ಪತ್ರವನ್ನು ಆಗಸ್ಟ್ 27, 1996 ರಂದು ಟಾಟಾ ಗ್ರೂಪ್‌ನ ಮುಖ್ಯ ಕಚೇರಿಯಾದ ಬಾಂಬೆ ಹೌಸ್‌ನಿಂದ ಕಾಗದದ ಹಾಳೆಯಲ್ಲಿ ಬರೆಯಲಾಗಿದೆ.

ಈ ಸುದ್ದಿಯನ್ನೂ ಓದಿ: Ratan Tata: ಸಿರಿವಂತರಾಗಿದ್ದರೂ ರತನ್ ಟಾಟಾ ಧರಿಸುತ್ತಿದ್ದ ವಾಚ್‌ ಯಾವುದು ನೋಡಿ!