Saturday, 12th October 2024

ಜೂನ್6 ರಿಂದ 8ರವರೆಗೆ ಆರ್​ಬಿಐ ಎಂಪಿಸಿ ಸಭೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಮುಂಬರುವ ಜೂನ್ 8 ರ ಪ್ರಕಟಣೆಯ ಸಮಯದಲ್ಲಿ ಪಾಲಿಸಿ ರೆಪೊ ದರವನ್ನು (ಮಾನ ದಂಡದ ಬಡ್ಡಿದರ) ಶೇಕಡಾ 6.5 ರಲ್ಲಿಯೇ ಮುಂದುವರಿಸುವ ಸಾಧ್ಯತೆಯಿದೆ.

ಏಪ್ರಿಲ್​ನಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿರುವುದು ಮತ್ತು ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಇಳಿಕೆ ಯಾಗುವ ಸಾಧ್ಯತೆಗಳಿರುವುದು ಹಾಗೂ ಈ ಇದಕ್ಕೆ ಈ ಹಿಂದಿನ ಬಡ್ಡಿದರ ಏರಿಕೆಯ ನಿರ್ಧಾರ ಕಾರಣ ವಾಗಿರ ಬಹುದು ಎಂಬ ಕಾರಣದಿಂದ ಈಗ ಮತ್ತೆ ಪಾಲಿಸಿ ರೆಪೊದರಗಳನ್ನು ಏರಿಸುವ ಸಾಧ್ಯತೆಗಳಿಲ್ಲ ಎಂದು ಹೇಳಲಾ ಗಿದೆ.

ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಆರು ಸದಸ್ಯರ ವಿತ್ತೀಯ ನೀತಿ ಸಮಿತಿಯ (ಎಂಪಿಸಿ) ಸಭೆ ಜೂನ್ 6 ರಿಂದ 8ರವರೆಗೆ ನಡೆಯಲಿದೆ. ಎಂಪಿಸಿಯ 43 ನೇ ಸಭೆಯ ನಿರ್ಧಾರವನ್ನು ಜೂನ್ 8 ರ ಗುರುವಾರ ಪ್ರಕಟಿಸಲಾಗುವುದು. ಏಪ್ರಿಲ್‌ನಲ್ಲಿ ನಡೆದ ಈ ಹಿಂದಿನ ಎಂಪಿಸಿ ಸಭೆಯ ನಂತರ, ಆರ್‌ಬಿಐ ತನ್ನ ದರ ಏರಿಕೆ ಚಕ್ರಕ್ಕೆ ಕಡಿವಾಣ ಹಾಕಿದೆ ಮತ್ತು ಮತ್ತು ರೆಪೊ ದರವನ್ನು 6.5 ಪ್ರತಿಶತದಲ್ಲಿ ಸ್ಥಿರವಾಗಿರಿಸಿದೆ.

ಏಪ್ರಿಲ್‌ನಲ್ಲಿ ಗ್ರಾಹಕ ಬೆಲೆ ಆಧಾರಿತ (ಸಿಪಿಐ) ಹಣದುಬ್ಬರವು 18 ತಿಂಗಳ ಕನಿಷ್ಠ ಶೇಕಡಾ 4.7 ಕ್ಕೆ ಇಳಿಕೆಯಾಗಿರುವುದರ ಮಧ್ಯೆ ಈಗ ಎಂಪಿಸಿ ಸಭೆ ನಡೆಯಲಿದೆ. ಮೇ ತಿಂಗಳ ಸಿಪಿಐ ಅನ್ನು ಜೂನ್ 12 ರಂದು ಘೋಷಿಸಲು ನಿರ್ಧರಿಸಲಾಗಿದೆ.