Thursday, 5th December 2024

Re-Election: ಇವಿಎಂ ಬಗ್ಗೆ ನಂಬಿಕೆ ಇಲ್ಲ… ಮತಪತ್ರಗಳ ಮೂಲಕ ಮರು ಮತದಾನಕ್ಕೆ ಮುಂದಾದ ಗ್ರಾಮಸ್ಥರು!

Re-Election

ಮುಂಬೈ: ಭಾರತದಲ್ಲಿ ಇವಿಎಂ (EVM) ವಿರುದ್ಧ ಆಗಾಗ ಆರೋಪಗಳು ಕೇಳಿ ಬರುತ್ತಿರುತ್ತವೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಯ ಬಗ್ಗೆ ಕಾಂಗ್ರೆಸ್‌ ಹಾಗೂ ಮೈತ್ರಿಕೂಟ ಅನುಮಾನ ವ್ಯಕ್ತಪಡಿಸಿದ್ದವು. ಆದರೆ ಸುಪ್ರಿಂ ಕೋರ್ಟ್‌ ಅದಕ್ಕೆ ಚಾಟಿ ಬೀಸಿತ್ತು. ಇದೀಗ ಮಹಾರಾಷ್ಟ್ರದ (Maharashtra Assembly Election) ಮಲ್‌ಶ್ರಿಯಾಸ್‌ ವಿಧಾನಸಭೆ ಕ್ಷೇತ್ರದ ಮರ್ಕರವಾಡಿ ಗ್ರಾಮಸ್ಥರು ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿ ಮತಪತ್ರಗಳ ಮೂಲಕ ಮರು ಮತ (Re-Election) ಚಲಾವಣೆಗೆ ತಯಾರಿ ನಡೆಸಿದ್ದರು. ಆದರೆ ಪೊಲೀಸರು ಅದನ್ನು ತಡೆದಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ನಡೆದಿದ್ದ ಮಹಾರಾಷ್ಟ್ರದ ವಿಧಾನ ಸಭೆ ಚುನಾವಣೆಯ ಫಲಿತಾಂಶದಿಂದ ಅತೃಪ್ತರಾದ ಗ್ರಾಮಸ್ಥರು ಸಾಂಕೇತಿಕವಾಗಿ ಮರು ಮತದಾನ ಮಾಡುವುದಾಗಿ ಘೋಷಣೆ ಮಾಡಿದ್ದರು. ಮರ್ಕಡ್ವಾಡಿ ನಡೆದ ವಿಧಾನಸಭಾ ಕ್ಷೇತ್ರದಲ್ಲಿ ನವೆಂಬರ್ 20ರಂದು ನಡೆದ ಚುನಾವಣೆಯಲ್ಲಿ ಎನ್‌ಸಿಪಿ (ಶರದ್ ಪವಾರ್ ಬಣ) ಉತ್ತಮರಾವ್ ಜನ್ಕರ್ ಬಿಜೆಪಿಯ ರಾಮ್ ಸತ್ಪುಟೆ ವಿರುದ್ಧ 13,147 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಇದರಿಂದ ಗ್ರಾಮಸ್ಥರು ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

ಡಿ. 5 ರಂದು ಸಾಂಕೇತಿಕವಾಗಿ ಮರು ಮತದಾನ ಮಾಡಲು ಸಜ್ಜಾಗಿದ್ದವರನ್ನು ಪೊಲೀಸರು ತಡೆದಿದ್ದಾರೆ. ಈ ಹಿಂದೆ ಜಿಲ್ಲಾಡಳಿತ ಗ್ರಾಮದಲ್ಲಿ ನಿಷೇಧಾಜ್ಞೆ ಹೊರಡಿಸಿತ್ತು. ಈ ಬಗ್ಗೆ ಸೊಲ್ಲಾಪುರ ಅತುಲ್ ಕುಲಕರ್ಣಿ ಮಾತನಾಡಿ, “ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮರು ಮತದಾನ ಕೈ ಬಿಡುವಂತೆಯೂ ಗ್ರಾಮಸ್ಥರ ಮನವೊಲಿಸಲಾಗುತ್ತಿದೆ ಎಂದು ತಿಳಿಸಿದ್ದರು.

ಇದೀಗ ಪೊಲೀಸ್ ಉಪಾಧೀಕ್ಷಕ ನಾರಾಯಣ ಶಿರಗಾಂವಕರ ಗ್ರಾಮಸ್ಥರಿಗೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. ಇದು ಕಾನೂನು ಬಹಿರವಾಗಿದ್ದು, ಕಾನೂನನ್ನು ಗೌರವಿಸಬೇಕು ಎಂದು ಅವರು ಹೇಳಿದ್ದಾರೆ.

ನಂತರ ಸ್ಥಳೀಯ ಶಾಸಕ ಜಂಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿ, ಪೊಲೀಸರ ಎಚ್ಚರಿಕೆ ಹಾಗೂ ಸೆಕ್ಷನ್ 144 ಜಾರಿ ಬಳಿಕ ಮರ್ಕಡವಾಡಿ ಗ್ರಾಮಸ್ಥರು ಸೌಹಾರ್ದಯುತವಾಗಿ ಚುನಾವಣೆ ರದ್ದುಪಡಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ. ಮುಂದಿನ ದಿನದಲ್ಲಿ ಮತದಾನ ಹಾಗೂ ಇವಿಎಂ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Viral News: ಇದು ನಿಜವಾಗ್ಲೂ ಶಾಕಿಂಗ್‌ ಸುದ್ದಿ! ಭವಿಷ್ಯದಲ್ಲಿ ದ.ಕೊರಿಯಾ ಭೂಪಟದಿಂದಲೇ ಮಾಯವಾಗಬಹುದಂತೆ – ಇಲ್ಲಿದೆ ಕಾರಣ