Saturday, 14th December 2024

Reliance AGM Meeting: ಹೊಸ ದಾಖಲೆ ಬರೆದ ರಿಲಯನ್ಸ್ ಸಾಮಾನ್ಯ ವಾರ್ಷಿಕ ಸಭೆ; ಬರೋಬ್ಬರಿ 5.52 ಲಕ್ಷ ಜನರು ಭಾಗಿ

Reliance AGM 2024 meeting

ನವದೆಹಲಿ: ಮುಕೇಶ್ ಅಂಬಾನಿ(Mukesh Ambani) ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್‌(Reliance AGM Meeting)ನ ಆನ್‌ಲೈನ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 5 ಲಕ್ಷ 52 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಷೇರುದಾರರು ಮತ್ತು ಇತರರು ಭಾಗವಹಿಸಿದರು. ಷೇರುದಾರರು ಹೆಚ್ಚಿನ ಸಂಖ್ಯೆಯಲ್ಲಿ ವಾರ್ಷಿಕ ಸಾಮಾನ್ಯ ಸಭೆಗೆ ಹಾಜರಾಗುವ ಮೂಲಕ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದರು. 2023ರಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಸುಮಾರು 4 ಲಕ್ಷ 30 ಸಾವಿರ ಜನರು ಭಾಗವಹಿಸಿದ್ದು ಹಿಂದಿನ ದಾಖಲೆಯಾಗಿತ್ತು. 2022ರಲ್ಲಿ ಈ ಸಂಖ್ಯೆ 3 ಲಕ್ಷ 90 ಸಾವಿರ ಇತ್ತು. ಕೋವಿಡ್ ಸಾಂಕ್ರಾಮಿಕದ ಸಮಯದಿಂದಲೂ ಕಂಪನಿಯು ವರ್ಚುವಲ್ ವಾರ್ಷಿಕ ಸಾಮಾನ್ಯ ಸಭೆಗಳನ್ನು ನಡೆಸುತ್ತಿದೆ.

ಲಕ್ಷಗಟ್ಟಲೆ ಷೇರುದಾರರು ತಾವು ಇರುವಂಥ ಸ್ಥಳದಿಂದಲೇ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವಂತೆ ಕಂಪನಿಯು ಹಲವು ಪ್ರಮುಖ ತಾಂತ್ರಿಕ ವ್ಯವಸ್ಥೆಗಳನ್ನು ಮಾಡಿತ್ತು. ವಿಡಿಯೋ ಕಾಲಿಂಗ್ ಆಪ್ ಜಿಯೋಮೀಟ್ (JioMeet) ನಲ್ಲಿ ನಡೆದ ಕಂಪನಿಯ ವಾರ್ಷಿಕ ಸಭೆಯಲ್ಲಿ ಶ್ರವಣ ದೋಷವುಳ್ಳವರಿಗೆ ಮತ್ತು ಮಾತು ಬಾರದವರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಸಹ ಮಾಡಲಾಗಿತ್ತು. ಕಂಪನಿಯು ಷೇರುದಾರರಿಗೆ ಮಂಡಿಸಿದ ಎಲ್ಲ ಪ್ರಸ್ತಾಪಗಳು ಸಂಕೇತ ಭಾಷೆಯಲ್ಲಿ ಲಭ್ಯವಿವೆ. ಅಲ್ಲದೆ, ರಿಲಯನ್ಸ್ ಚಾಟ್‌ಬಾಟ್ ಸಂಖ್ಯೆಯನ್ನು ಸಹ ಬಿಡುಗಡೆ ಮಾಡಿತು, ಅದರ ಮೂಲಕ ಷೇರುದಾರರು ಮತ್ತು ಇತರರು ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಬಹುದಾಗಿತ್ತು.

ರಿಲಯನ್ಸ್ ಇಂಡಸ್ಟ್ರೀಸ್ ವಕ್ತಾರರು ಮಾತನಾಡಿ, “ಎಜಿಎಂನಲ್ಲಿ ಹೆಚ್ಚು ಹೆಚ್ಚು ಷೇರುದಾರರು ಭಾಗವಹಿಸುವುದು ಕಂಪನಿಯಲ್ಲಿ ಅವರಿಗೆ ಇರುವಂಥ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. 5 ಲಕ್ಷದ 52 ಸಾವಿರಕ್ಕೂ ಹೆಚ್ಚು ಜನರು ಜಿಯೋಮೀಟ್‌ಗೆ ಸೇರುತ್ತಿರುವುದು ದೇಶಕ್ಕೆ ಮಾತ್ರವಲ್ಲದೆ ಜಾಗತಿಕ ಮಟ್ಟದ ಸಾಧನೆಯಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಮ್ಮ ತಾಂತ್ರಿಕ ತಂಡಗಳು ಹಗಲಿರುಳು ಶ್ರಮಿಸಿವೆ,” ಎಂದಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಷೇರುದಾರರಿಗೆ ಬಂಪರ್

ರಿಲಯನ್ಸ್ ಇಂಡಸ್ಟ್ರೀಸ್ ಷೇರುದಾರರಿಗೆ ಬಂಪರ್ ಸುದ್ದಿ ಇಲ್ಲಿದೆ. ಪ್ರತಿ ಈಕ್ವಿಟಿ ಷೇರಿಗೆ ಸಮನಾಗಿ ಅಂದರೆ, ಪ್ರತಿ ಒಂದು ಷೇರಿಗೆ ಒಂದು ಬೋನಸ್ ಷೇರು ನೀಡುವುದಕ್ಕೆ ಗುರುವಾರದಂದು ಪ್ರಸ್ತಾವ ಮಾಡಿದ್ದು, ಅದಕ್ಕಾಗಿ ಸೆಪ್ಟೆಂಬರ್ ಐದನೇ ತಾರೀಕಿನ ಗುರುವಾರದಂದು ಮಂಡಳಿ ನಿರ್ದೇಶಕರು ಸಭೆಯನ್ನು ಸೇರಲಿದೆ. ಈ ಶಿಫಾರಸಿಗೆ ಅನುಮೋದನೆ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆಸಲಿದ್ದಾರೆ. ಅಂದಹಾಗೆ 1:1 ಅನುಪಾತದಲ್ಲಿ ರಿಲಯನ್ಸ್ ಷೇರುಗಳನ್ನು ಬೋನಸ್ ರೂಪದಲ್ಲಿ ವಿತರಿಸುವುದಕ್ಕೆ ಶಿಫಾರಸು ಮಾಡಲಾಗಿದೆ. ಈ ಪ್ರಕಟಣೆ ಹೊರಬರುವ ಹೊರಬರುವ ಹೊತ್ತಿಗೆ ರಿಲಯನ್ಸ್ ಇಂಡಸ್ಟ್ರೀಸ್ ಪ್ರತಿ ಷೇರು 3065 ರೂಪಾಯಿ ಆಸುಪಾಸಿನಲ್ಲಿ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿತ್ತು. 65 ರೂಪಾಯಿಗೂ ಹೆಚ್ಚು ಒಂದೇ ದಿನದಲ್ಲಿ ಬೆಲೆ ಏರಿಕೆ ಕಂಡಿದೆ.