Sunday, 15th December 2024

Prem Chand Bairwa: ರಷ್ಯನ್‌ ಮಹಿಳೆ ಜೊತೆಗೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ರಾಜಸ್ಥಾನ ಡಿಸಿಎಂ? ಆರೋಪ ತಳ್ಳಿಹಾಕಿದ ಬಿಜೆಪಿ

Prem Chand Bairwa

ಜೈಪುರ: ನವದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ (Five star Hotel) ರಷ್ಯಾದ ಮಹಿಳೆಯೊಂದಿಗೆ ರಾಜಸ್ಥಾನದ ಉಪಮುಖ್ಯಮಂತ್ರಿ ಪ್ರೇಮ್ ಚಂದ್ ಬೈರ್ವಾ (Rajasthan DCM Prem Chand Bairwa) ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಇದನ್ನು ಭಾರತೀಯ ಜನತಾ ಪಕ್ಷ (BJP) ಬಲವಾಗಿ ನಿರಾಕರಿಸಿದೆ.

ಬಿಜೆಪಿಯ ರಾಜಸ್ಥಾನ ಘಟಕದ ಅಧ್ಯಕ್ಷ ಮದನ್ ರಾಥೋಡ್ ಅವರು ಈ ಕುರಿತ ವರದಿಗಳನ್ನು ಕಟುವಾಗಿ ನಿರಾಕರಿಸಿದ್ದಾರೆ. ವಿರೋಧ ಪಕ್ಷಗಳು ಉಪಮುಖ್ಯಮಂತ್ರಿಯ ಚಾರಿತ್ರ್ಯಹನನಕ್ಕೆ ಯತ್ನಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಜೈಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಈ ಮಟ್ಟಕ್ಕೆ ಕುಸಿದಿದೆ ಎಂದು ಆರೋಪಿಸಿದರು. ಪ್ರತಿಪಕ್ಷಗಳು ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿವೆ, ಕಳಪೆ ರಾಜಕೀಯಕ್ಕೆ ಇಳಿದಿವೆ ಎಂದರು.

“ಯಾವುದೇ ಬಿಜೆಪಿ ನಾಯಕರು ಇದರಲ್ಲಿ ಭಾಗಿಯಾಗಿಲ್ಲ. ಇದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಇದು ಕಳಪೆ ರಾಜಕೀಯ. ಯಾರೂ ಅಷ್ಟು ಕೀಳಾಗಿ ವರ್ತಿಸಬಾರದು. ರಾಜಕಾರಣಿಗಳು ಜನರನ್ನು ದಾರಿತಪ್ಪಿಸುವುದು, ವದಂತಿಗಳನ್ನು ಹರಡುವುದು ಅಥವಾ ದುರುಪಯೋಗಪಡಿಸುವುದನ್ನು ತಪ್ಪಿಸಬೇಕು” ಎಂದು ರಾಥೋಡ್ ಹೇಳಿದರು.‌

ಬಿಜೆಪಿಯ ಇತರ ನಾಯಕರೂ ಬೈರ್ವಾ ಅವರನ್ನು ರಕ್ಷಿಸಲು ಧಾವಿಸಿದ್ದಾರೆ. ಕ್ಯಾಬಿನೆಟ್ ಸಚಿವ ಕಿರೋಡಿ ಲಾಲ್ ಮೀನಾ, ಸಾಮಾಜಿಕ ಮಾಧ್ಯಮ ವೇದಿಕೆ Xನಲ್ಲಿ, ಉಪಮುಖ್ಯಮಂತ್ರಿ ಬಗ್ಗೆ ಕೇಳಿಬಂದಿರುವ ಆರೋಪಗಳು ಹಸಿ ಸುಳ್ಳು ಎಂದು ಖಂಡಿಸಿದರು.

ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾಟೆ ಅವರು ಈ ಘಟನೆಯ ಬಗ್ಗೆ ಒಂದು ಪೋಸ್ಟ್ ಮಾಡಿದ್ದರು. ಮರುದಿನ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕೂಡ ಡಿಸಿಎಂ ಕುರಿತು ಆರೋಪ ಮಾಡಿತ್ತು.

ಪ್ರಕರಣವೇನು?

ರಾಜಸ್ಥಾನದ ಉಪಮುಖ್ಯಮಂತ್ರಿ ಬೈರ್ವಾ, ರಷ್ಯನ್‌ ಮಹಿಳೆಯೊಬ್ಬಳೊಂದಿಗೆ ದಿಲ್ಲಿಯ ಪಂಚತಾರಾ ಹೋಟೆಲ್‌ನಲ್ಲಿ ಪತ್ತೆಯಾಗಿದ್ದರು. ಪೊಲೀಸರು ಅವರನ್ನು ಮೊದಲು ಬಂಧಿಸಿದ್ದರು. ಅವರು ಯಾರು ಎಂದು ಗೊತ್ತಾದ ಬಳಿಕ ಬಿಟ್ಟು ಕಳಿಸಿದ್ದರು. ದೆಹಲಿಯ ಲೆ ಮೆರಿಡಿಯನ್ ಹೋಟೆಲ್‌ನಲ್ಲಿ ಘಟನೆ ನಡೆದಿತ್ತು ಎಂದು ಆರೋಪಿಸಲಾಗಿದೆ.

ಬೈರ್ವಾ ಅವರ ಹೆಸರು ಈ ಹಿಂದೆಯೂ ವಿವಾದಗಳೊಂದಿಗೆ ತಳುಕು ಹಾಕಿಕೊಂಡಿದೆ. ವಾರದ ಹಿಂದೆ ಅವರ ಮಗ ಚಿನ್ಮಯ್ ಕುಮಾರ್ ಬೈರ್ವಾ ಒಂದು ರೀಲ್‌ನಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಆತ ಸ್ಟೀರಿಂಗ್‌ನಿಂದ ಕೈಗಳನ್ನು ತೆಗೆದು ಡ್ರೈವ್‌ ಮಾಡುವುದು ಕಂಡಿತ್ತು. ಪೊಲೀಸರು ಈ ವಾಹನದ ಬೆಂಗಾವಲಾಗಿ ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು. ಸರ್ಕಾರಿ ಲೆಟರ್‌ಹೆಡ್‌ನ ದುರ್ಬಳಕೆ ಆರೋಪದಲ್ಲಿ ಕೂಡ ಬೈರ್ವಾ ಸುದ್ದಿಯಲ್ಲಿದ್ದರು.

ಇದನ್ನೂ ಓದಿ: Rahul Dravid : ಅಧಿಕೃತವಾಗಿ ರಾಜಸ್ಥಾನ್ ರಾಯಲ್ಸ್‌ತಂಡದ ಕೋಚಿಂಗ್ ವಿಭಾಗ ಸೇರಿದ ರಾಹುಲ್ ದ್ರಾವಿಡ್‌