Friday, 15th November 2024

Retail Inflation: ಶೇ. 6.21ಕ್ಕೆ ಏರಿದ ರೀಟೇಲ್ ಹಣದುಬ್ಬರ; 14 ತಿಂಗಳಲ್ಲೇ ಗರಿಷ್ಠ

Retail Inflation

ಹೊಸದಿಲ್ಲಿ: ಗ್ರಾಹಕ ಬೆಲೆ ಅನುಸೂಚಿ ಆಧಾರಿತ ರೀಟೇಲ್ ಹಣದುಬ್ಬರ (Retail Inflation) ಅಕ್ಟೋಬರ್‌ನಲ್ಲಿಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 2024ರ ಅಕ್ಟೋಬರ್‌ನಲ್ಲಿ ರೀಟೇಲ್ ಹಣದುಬ್ಬರ ಶೇ. 6.21ಕ್ಕೆ ತಲುಪಿದೆ. ಇದು 14 ತಿಂಗಳಲ್ಲೇ ಗರಿಷ್ಠ ದರ ಎನಿಸಿಕೊಂಡಿದೆ. ಈ ಮೂಲಕ ಆರ್​ಬಿಐ (Reserve Bank of India) ನಿಗದಿ ಮಾಡಿಕೊಂಡಿದ್ದ ಹಣದುಬ್ಬರ ಮಿತಿಯಾದ ಶೇ. 6 ಅನ್ನೂ ದಾಟಿ ಮುಂದಕ್ಕೆ ಸಾಗಿದೆ. ಕಳೆದ ವರ್ಷ ಇದೇ ವೇಳೆ ಹಣದುಬ್ಬರ ಶೇ. 4.87 ಆಗಿತ್ತು. ತರಕಾರಿ ಸಹಿತ ಆಹಾರ ವಸ್ತುಗಳ ಬೆಲೆ ಏರಿಕೆಯೇ ಹಣದುಬ್ಬರ ಹೆಚ್ಚಾಗಲು ಕಾರಣ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ಆಹಾರ ಹಣದುಬ್ಬರ (Food inflation) ಅಕ್ಟೋಬರ್​ನಲ್ಲಿ ಶೇ. 10.87ರಷ್ಟಿದೆ.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹಣದುಬ್ಬರ ದರವು ಕ್ರಮವಾಗಿ ಶೇ. 6.68 ಮತ್ತು ಶೇ. 5.62 ಆಗಿದೆ. ಹಣದುಬ್ಬರ ನಿಯಂತ್ರಣಕ್ಕಾಗಿ ಆರ್‌ಬಿಐ ಕಳೆದ ತಿಂಗಳು ರೆಪೊ ದರವನ್ನು ಶೇ. 6.5ರಲ್ಲೇ ಉಳಿಸಿಕೊಂಡಿತ್ತು. ಆರ್‌ಬಿಐ ಹಣದುಬ್ಬರ ಗುರಿಯು ಶೇ. 4ರಷ್ಟಿದೆ. ಸೆಪ್ಟೆಂಬರ್‌ನಲ್ಲ ಹಣದುಬ್ಬರ ಶೇ 5.49ರಷ್ಟಿತ್ತು. ಅಕ್ಟೋಬರ್​ನಲ್ಲಿ ಇದು ಇನ್ನಷ್ಟು ಏರಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ ಶೇ. 6ರ ಮಿತಿಯನ್ನೂ ದಾಟಿ ಹೋಗುತ್ತದೆಂದು ಯಾರೂ ಅಂದುಕೊಂಡಿರಲಿಲ್ಲ.

ಅಖಿಲ ಭಾರತ ಗ್ರಾಹಕ ಆಹಾರ ಬೆಲೆ ಸೂಚ್ಯಂಕ (All India Consumer Food Price Index) 2024ರ ಅಕ್ಟೋಬರ್‌ನಲ್ಲಿ ಆಹಾರ ಹಣದುಬ್ಬರವು ಶೇ. 10.87ರಷ್ಟಿದೆ ಎಂದು ತಿಳಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಅನುಗುಣವಾದ ದರಗಳು ಕ್ರಮವಾಗಿ ಶೇ. 10.69 ಮತ್ತು ಶೇ. 11.09ರಷ್ಟಿದೆ. ಕಳೆದ ವರ್ಷ ಇದೇ ವೇಳೆಗೆ ಇದು ಶೇ. 6.61ರಷ್ಟಿತ್ತು. ರೀಟೇಲ್ ಹಣದುಬ್ಬರವು ಆಗಸ್ಟ್‌ನಲ್ಲಿ ಶೇ. 3.65 ಮತ್ತು ಜುಲೈಯಲ್ಲಿ ಶೇ. 3.54ರಷ್ಟಿತ್ತು.

ಯಾವ ರಾಜ್ಯದಲ್ಲಿ ಅಧಿಕ? ಎಲ್ಲಿ ಕಡಿಮೆ?

2023ರ ಅಕ್ಟೋಬರ್‌ಗೆ ಹೋಲಿಸಿದರೆ ಛತ್ತೀಸ್‌ಗಢವು ಈ ಬಾರಿ ಶೇ. 8.84ರಷ್ಟು ಗರಿಷ್ಠ ಹಣದುಬ್ಬರವನ್ನು ಹೊಂದಿದೆ. ಬಿಹಾರ (ಶೇ. 7.83) ಮತ್ತು ಒಡಿಶಾ (ಶೇ. 7.51) ನಂತರದ ಸ್ಥಾನಗಳಲ್ಲಿವೆ. ದಿಲ್ಲಿಯಲ್ಲಿ ಕನಿಷ್ಠ ಹಣದುಬ್ಬರ ಶೇ. 4.01ರಷ್ಟಿದ್ದರೆ, ಪಶ್ಚಿಮ ಬಂಗಾಳದಲ್ಲಿ ಶೇ. 4.63 ಮತ್ತು ಮಹಾರಾಷ್ಟ್ರದಲ್ಲಿ ಶೇ. 5.38ರಷ್ಟಿದೆ.

“ಆಹಾರ ಉತ್ಪನ್ನಗಳು ವಿಶೇಷವಾಗಿ ತರಕಾರಿಗಳ ಬೆಲೆ ಶೇ. 42ಕ್ಕಿಂತ ಹೆಚ್ಚಾಗಿರುವುದು ಹಣದುಬ್ಬರ ಏರಿಕೆಗೆ ಕಾರಣ. ಉತ್ತಮ ಮುಂಗಾರು ಮತ್ತು ಉತ್ತಮ ರಾಬಿ ಫಸಲಿನ ಪರಿಣಾಮವಾಗಿ ಮುಂದಿನ ತ್ರೈಮಾಸಿಕದಲ್ಲಿ ಆಹಾರ ಉತ್ಪನ್ನಗಳ ಬೆಲೆ ಕಡಿಮೆಯಾಗುತ್ತದೆʼʼ ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣದುಬ್ಬರ ನಿಯಂತ್ರಿಸುವುದು ತಮ್ಮ ಪ್ರಮುಖ ಆದ್ಯತೆ ಎಂದು ಹೇಳಿದ್ದರು. ಅದಕ್ಕೆ ಪೂರಕವಾಗಿ ರೆಪೊ ದರವನ್ನು ಇಳಿಸದೆ ಅದೇ ರೀತಿ ಕಾಯ್ದುಕೊಳ್ಳಲಾಗಿತ್ತು. ಹೀಗಿದ್ದೂ ಹಣದುಬ್ಬರ ಏರಿಕೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನೂ ಓದಿ: Sovereign Gold Bond: ಗೋಲ್ಡ್‌ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದವರಿಗೆ ಲಾಭ ಡಬಲ್