Saturday, 14th December 2024

ನಿವೃತ್ತ ನ್ಯಾ.ಪಂಕಜ್‌ ನಖ್ವಿ- ಭಾರತ ಜೂಡೊ ಫೆಡರೇಷನ್‌ ಆಡಳಿತಾಧಿಕಾರಿ

ನವದೆಹಲಿ: ಅಲಹಾಬಾದ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಂಕಜ್‌ ನಖ್ವಿ ಅವರನ್ನು ಭಾರತ ಜೂಡೊ ಫೆಡರೇಷನ್‌ನ ಆಡಳಿತಾಧಿಕಾರಿಯಾಗಿ ದೆಹಲಿ ಹೈಕೋರ್ಟ್‌ ನೇಮಿಸಿದೆ.

ಫೆಡರೇಷನ್‌ನ ಪದಾಧಿಕಾರಿಗಳ ನಡುವೆ ಕೆಲವೊಂದು ವಿವಾದಗಳು ತಲೆದೋರಿವೆ ಎಂದು ಹೇಳಿ ಕರ್ನಾಟಕ, ಹರಿಯಾಣ ರಾಜ್ಯಗಳ ಜೂಡೊ ಸಂಸ್ಥೆಗಳು ಹಾಗೂ ಬಾಂಬೆ ಜೂಡೊ ಸಂಸ್ಥೆ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿತ್ತು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯಶ್ವಂತ್ ವರ್ಮಾ ಅವರು ಆಡಳಿತಾಧಿಕಾರಿ ಯನ್ನು ನೇಮಿಸಿ, ತೀರ್ಪು ಹೊರಡಿಸಿದರು.

ಫೆಡರೇಷನ್‌ನ ಅಡಳಿತ ನೋಡಿಕೊಳ್ಳುತ್ತಿದ್ದ ಸಮಿತಿಯು ತನ್ನ ಅಧಿಕಾರವನ್ನು ಆಡಳಿತಾಧಿಕಾರಿಗೆ ಹಸ್ತಾಂತರಿಸಬೇಕು. ನ್ಯಾಯಾಲಯದ ಮುಂದಿನ ಆದೇಶದವರೆಗೂ ಆಡಳಿತಾಧಿಕಾರಿ, ಫೆಡರೇಷನ್‌ನ ದೈನಂದಿನ ವ್ಯವಹಾರ ನೋಡಿಕೊಳ್ಳಬೇಕು’ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ರಾಷ್ಟ್ರೀಯ ಕ್ರೀಡಾ ನೀತಿಗೆ ಅನುಗುಣವಾಗಿ ಹೊಸ ನಿಯಮಾವಳಿಗಳ ಕರಡು ಸಿದ್ಧಪಡಿಸಬೇಕು. ಕರಡು ನಿಯಮಾವಳಿಗಳನ್ನು ಫೆಡರೇಷನ್‌ನ ಎಲ್ಲ ಸದಸ್ಯರ ಮುಂದಿಟ್ಟ, ಅವರ ಅಭಿಪ್ರಾಯ ಪಡೆದುಕೊಳ್ಳಬೇಕು. ಆ ಬಳಿಕ ಕರಡನ್ನು ಅನುಮೋದನೆಗಾಗಿ ನ್ಯಾಯಾಲಯದ ಮುಂದಿಡಬೇಕು. ಆಡಳಿತಾಧಿಕಾರಿ ತಮ್ಮ ಮಧ್ಯಂತರ ವರದಿಯನ್ನು ಆರು ವಾರಗಳ ಒಳಗಾಗಿ ಸಲ್ಲಿಸಬೇಕು’ ಎಂದು ಹೇಳಿದೆ.