ಹೊಸದಿಲ್ಲಿ: ಇನ್ನೇನು ಕೆಲವೇ ದಿನಗಳಲ್ಲಿ 2025ರ ಹೊಸ ವರ್ಷ(New year)ಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಈ ನಡುವೆ ಒಂದೆಡೆ ಆರೋಗ್ಯ ಕ್ಷೇತ್ರದಲ್ಲಿನ ಅನಾಹುತಗಳು ಜನರ ಜೀವ ಹಿಂಡುತ್ತಿದ್ದರೆ, ಇನ್ನೊಂದೆಡೆ ನೈಸರ್ಗಿಕ ಅವಘಡಗಳು ಕಂಗೆಡುತ್ತಿಸುತ್ತಿವೆ. 2024 ಇಂತಹ ನೂರಾರು ನೋವಿನ ಗಳಿಗೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿಯೂ ಜನಮಾನಸದಲ್ಲಿ ಹೆಸರು ಅಚ್ಚಳಿಯದೆ ಮೂಡಿಸಿದ ಹಲವಾರು ರಾಜಕೀಯ(political) ಗಣ್ಯರು ಜೀವನಕ್ಕೆ ವಿದಾಯ ಹೇಳಿದ್ದಾರೆ. ಈ ವರ್ಷ ನಮ್ಮನ್ನು ಅಗಲಿದ ರಾಜಕೀಯ ಗಣ್ಯ ವ್ಯಕ್ತಿಗಳ ಪಟ್ಟಿ ತೆರೆದರೆ ಹತ್ತಾರು ಹೆಸರುಗಳು ಕಾಣಿಸುತ್ತವೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಹಲವಾರು ಇದ್ದಾರೆ. ಅವರಲ್ಲಿ ಕೆಲವು ಗಣ್ಯರ ನೆನಪು ಇಲ್ಲಿದೆ (Year Ender 2024).
ಇವಿಕೆಎಸ್ ಇಳಂಗೋವನ್
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಇವಿಕೆಎಸ್ ಇಳಂಗೋವನ್ ಅವರು ಡಿ. 14ರಂದು ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದರು. ಈರೋಡ್ ಪೂರ್ವ ಕ್ಷೇತ್ರದ ಶಾಸಕರಾಗಿದ್ದ 75 ವರ್ಷದ ಇಳಂಗೋವನ್ ಅವರು ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ನವೆಂಬರ್ 11ರಂದು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಸಿಬ್ಬಂದಿಯ ಪ್ರಯತ್ನದ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಬಾಬಾ ಸಿದ್ದಿಕಿ
ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ನಾಯಕ ಮತ್ತು ಮಾಜಿ ಶಾಸಕ ಬಾಬಾ ಸಿದ್ದಿಕಿ ಅವರನ್ನು ಅಕ್ಟೋಬರ್ 12ರಂದು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದರು. ಮುಂಬಯಿ ಉಪನಗರ ಬಾಂದ್ರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಗುಂಡಿನ ದಾಳಿ ಬಳಿಕ ಸಿದ್ದಿಕ್ ಅವರನ್ನು ಲೀಲಾವತಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಿದ್ದಿಕಿ ಸಾವನ್ನಪ್ಪಿದರು. ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಸಿದ್ದಿಕಿ ಇತ್ತೀಚೆಗೆ ಕಾಂಗ್ರೆಸ್ ಬಿಟ್ಟು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರಿದ್ದರು. ಇವರು ಮೂರು ಬಾರಿ ಶಾಸಕರಾಗಿದ್ದರು.
ಇನ್ನು ಬಾಬಾ ಸಿದ್ದಿಕಿಯ ಕೊಲೆಗೆ ಇದೀಗ ದೊಡ್ಡ ಟ್ವಿಸ್ಟೇ ಸಿಕ್ಕಿತ್ತು. ನಾವೇ ಕೊಲೆ ಮಾಡಿರೋದು ಅಂತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊಣೆ ಹೊತ್ತುಕೊಂಡಿತ್ತು. ಬಾಬಾ ಸಿದ್ದಿಕಿಯ ಕೊಲೆಯಲ್ಲಿ ಭಾಗಿಯಾಗಿರುವುದಾಗಿ ಬಿಷ್ಣೋಯ್ ಗ್ಯಾಂಗ್ ಒಪ್ಪಿಕೊಂಡಿತ್ತು. ಅಲ್ದೇ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ತುಂಬಾ ಆಪ್ತರಾಗಿದ್ದರು. ಹೀಗಾಗಿ ಸಲ್ಮಾನ್ ಖಾನ್‌ಗೆ ಪದೇ ಪದೆ ಜೀವ ಬೆದರಿಕೆ ಹಾಕ್ತಿರೋ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದಲೇ ಹತ್ಯೆ ಮಾಡಿರೋದು ಬಯಲಾಗಿದೆ.
ಸೀತಾರಾಮ್ ಯೆಚೂರಿ
ದೀರ್ಘಕಾಲದ ಅನಾರೋಗ್ಯಕ್ಕೀಡಾಗಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಸೆ. 12ರಂದು ನಿಧನರಾದರು. ತೀವ್ರ ಉಸಿರಾಟದ ಸೋಂಕಿನಿಂದಾಗಿ ರಾಜಕೀಯ ಕ್ಷೇತ್ರದ ಈ ಹಿರಿಯ ನಾಯಕರ ಆರೋಗ್ಯ ಕ್ಷೀಣಿಸಿತ್ತು. ಈ ಹಿನ್ನಲೆಯಲ್ಲಿ ಏಮ್ಸ್‌ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲ ಕೊಡದೆ ಸೆ. 12ರಂದು ಇಹಲೋ ಕೊನೆಯುಸಿರೆಳೆದರು.
ಇವರು 2005ರಲ್ಲಿ ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. 2015ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ – ಮಾರ್ಕ್ಸ್‌ವಾದಿಯ ಐದನೇ ಪ್ರಧಾನ ಕಾರ್ಯದರ್ಶಿಯಾಗಿ ಯೆಚೂರಿ ಅವಿರೋಧವಾಗಿ ಆಯ್ಕೆಯಾದರು. ಪ್ರಕಾಶ್ ಕಾರಟ್ ಅವರ ಉತ್ತರಾಧಿಕಾರಿಯಾದರು. 2022 ಏಪ್ರಿಲ್‌ನಲ್ಲಿ ಯೆಚೂರಿ ಸತತ ಮೂರನೇ ಬಾರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾಗಿದ್ದರು.
ಕೆ. ನಟವರ್ ಸಿಂಗ್
ಆ. 11ರಂದು ಕಾಂಗ್ರೆಸ್ ನಾಯಕ, ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ (95) ನಿಧನ ಹೊಂದಿದರು. ಸುಮಾರು ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ರಾಜಕೀಯಕ್ಕೆ ಬರುವ ಮೊದಲು ಅವರು ಐಎಫ್‌ಎಸ್ ಅಧಿಕಾರಿಯಾಗಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಕೆ. ನಟವರ್ ಸಿಂಗ್ ವಿದೇಶಾಂಗ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು. ವಿದೇಶಾಂಗ ನೀತಿ ರೂಪಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು.
ಸುಶೀಲ್ ಕುಮಾರ್ ಮೋದಿ
ಮೇ 13ರಂದು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸುಶೀಲ್ ಕುಮಾರ್ ಮೋದಿ (72) ನಿಧನ ಹೊಂದಿದರು. ಬಿಜೆಪಿಯ ಹಿರಿಯ ನಾಯಕ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ 2005ರಿಂದ 2020ರ ತನಕ ಬಿಹಾರ ಸರ್ಕಾರದ ಭಾಗವಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಬಿಹಾರ ರಾಜ್ಯದ ರಾಜಕೀಯದಲ್ಲಿ ಬಿಜೆಪಿ ಏಳಿಗೆಗೆ ಸುಶೀಲ್ ಕುಮಾರ್ ಮೋದಿ ಅವರ ಕೊಡುಗೆ ಅಪಾರ.
ಎಸ್. ಎಂ. ಕೃಷ್ಣ
ಡಿ. 10ರಂದು ಕೇಂದ್ರದ ಮಾಜಿ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ (92) ಹೃದಯಾಘಾತದಿಂದ ನಿಧನ ಹೊಂದಿದರು. ಮಂಡ್ಯ ಜಿಲ್ಲೆಯ ಎಸ್.ಎಂ. ಕೃಷ್ಣ 5 ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದರು. 2017ರಲ್ಲಿ ಬಿಜೆಪಿಯನ್ನು ಸೇರಿದ್ದರು. ಪಕ್ಷಬೇಧವಿಲ್ಲದೇ ಎಸ್.ಎಂ. ಕೃಷ್ಣ ನಿಧನಕ್ಕೆ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ. ವಿಧಾನಸಭಾಧ್ಯಕ್ಷರಾಗಿ, ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಹೀಗೆ ಅನೇಕ ಉನ್ನತ ಹುದ್ದೆಗಳಲ್ಲಿ ಎಸ್.ಎಂ.ಕೃಷ್ಣ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ, ದೇಶಕ್ಕೆ ತಮ್ಮದೇ ಆದ ಕೊಡುಗೆಯ್ನು ನೀಡಿದ್ದಾರೆ.
ಈ ಸುದ್ದಿಯನ್ನು ಓದಿ: Year Ender 2024: ಲೋಕಸಭಾ ಚುನಾವಣೆಯಿಂದ ಅರವಿಂದ ಕೇಜ್ರಿವಾಲ್ ರಾಜೀನಾಮೆವರೆಗೆ; ಈ ವರ್ಷದ ಟಾಪ್ 10 ರಾಜಕೀಯ ಘಟನಾವಳಿಗಳಿವು